

ಬೇಲೂರು: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೀವನ ಅತ್ಯಮೂಲ್ಯವಾಗಿದ್ದು ಈ ಸಮಯವನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಜಗದೀಶ್ ನಾಯಕ್ ಹೇಳಿದರು.
ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 2023-24 ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳ ಜೀವನ ಅಮೂಲ್ಯವಾಗಿದೆ. ಎಲ್ಲ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮಲ್ಲಿರುವ ಪ್ರತಿಭೆಗೆ ಪೂರಕವಾಗಿ ಸಾಧನೆಯತ್ತ ಸಾಗಬೇಕು. ತಮಗೆ ದೊರೆತ ಅವಕಾಶಗಳನ್ನು ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸದೊಂದಿಗೆ ಮುನ್ನಡೆದರೆ ಮಾತ್ರ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ. ದುಶ್ಚಟಗಳ ದಾಸರಾಗಿ, ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಎಚ್.ಎಂ.ಮಹೇಶ್ ಮಾತನಾಡಿ, ವಿದ್ಯಾರ್ಥಿಗಳಾದ ನೀವುಗಳು ಉನ್ನತ ವಿದ್ಯಾಭ್ಯಾಸದೊಂದಿಗೆ ಜವಾಬ್ದಾರಿಯುತ ಸ್ಥಾನಕ್ಕೆ ಹೋಗಲಿದ್ದೀರಿ. ಆದ್ದರಿಂದ ಎಲ್ಲರೂ ತಮ್ಮ ಮುಂದಿನ ಜೀವನದಲ್ಲಿ ಉತ್ತಮ ಸಾಧನೆ ಮಾಡಿ ಕೀರ್ತಿವಂತರಾಗುವತ್ತ ಮುನ್ನಡೆಯಬೇಕು ಎಂದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರು, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕ್ರೀಡಾ ಮತ್ತು ಸಾಂಸ್ಕೃತಿಕ ಸಂಚಾಲಕ ಬಾಬು ಪ್ರಸಾದ್, ಎನ್‌ಎಸ್‌ಎಸ್ ಶಿಬಿರ ಸಂಚಾಲಕ ಮೋಹನ್ ಕುಮಾರ್, ರೋವರ್ಸ್ ಮತ್ತು ರೇಂಜರ್ಸ್ ಸಂಚಾಲಕರಾದ ವೀರಭದ್ರಪ್ಪ, ಪ್ರೇಮಾವತಿ, ಐಕ್ಯೂಎಸಿ ಸಂಚಾಲಕ ಡಾ.ನಾಗೇಂದ್ರಪ್ಪ, ಎನ್‌ಇಪಿ ಸಂಚಾಲಕ ಮಾರಿಯಾ ಪಿಂಟೊ, ಸಿಬ್ಬಂದಿ ಇದ್ದರು.