

ವಿರಾಜಪೇಟೆ: ದಾನ ಮಾಡುವುದರಿಂದ ಮಾನವನ ಜೀವನ ಸಾರ್ಥಕವಾಗುತ್ತದೆ ಎಂದು ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರು ರೆ.ಫಾ.ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು.
ವಿರಾಜಪೇಟೆ ಮದರ್ ತೆರೇಸಾ ಸೇವಾ ಕೇಂದ್ರದ ವತಿಯಿಂದ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನು ದಾನ ಧರ್ಮಗಳನ್ನು ಹೆಚ್ಚು ಮಾಡುವುದು ಸತ್ಕಾರ್ಯವಾಗಿದ್ದು, ದೇವರ ಆಶೀರ್ವಾದವು ಲಭಿಸುತ್ತದೆ. ಸಮಾಜಮುಖಿ ಚಿಂತನೆಗಳಿಂದ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಮದರ್ ತೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿಯೂ ಶ್ಲಾಘನೀಯವಾಗಿದೆ ಎಂದರು. ಮುಂದೆಯೂ ಸಂಸ್ಥೆಯ ವತಿಯಿಂದ ಸಮಾಜಮುಖಿ ಕಾರ್ಯಗಳು ನಡೆಯುವಂತಾಗಲಿ ಎಂದು ಹಾರೈಸಿದರು.
ಮದರ್ ತೆರೇಸಾ ಸೇವಾ ಕೇಂದ್ರದ ಅಧ್ಯಕ್ಷ ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಡಿಡಿಪಿಐ ಪೆರಿಗ್ರೀನ್ ಎಸ್ ಮಚ್ಚಾಡೋ ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಮ್ಮ ಸೇವಾ ಕೇಂದ್ರದ ವತಿಯಿಂದ ಪುಸ್ತಕಗಳನ್ನು ವಿತರಣೆ ಮಾಡುತ್ತ ಬಂದಿದ್ದು, ಮೊದಲ ವರ್ಷ 85ವಿದ್ಯಾರ್ಥಿಗಳಿಗೆ, ಎರಡನೇ ವರ್ಷ 174 ವಿದ್ಯಾರ್ಥಿಗಳಿಗೆ ಹಾಗೂ ಈ ವರ್ಷ ಒಟ್ಟು 155 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದೇವೆ. ಸರ್ವ ಸದಸ್ಯರ ಸಹಕಾರದಿಂದ ಈ ಕಾರ್ಯವು ನಡೆಯುತ್ತಿದ್ದು, ಅದರೊಂದಿಗೆ ಬಡವರಿಗೆ ಔಷಧ ಉಪಚಾರಕ್ಕೆ ಸಹಾಯ ನೀಡಲಾಗುತ್ತಿದೆ. ಜತೆಗೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಸೇವಾ ಕೇಂದ್ರದ ಸದಸ್ಯರು ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಅಥಿತಿಗಳು ಎಲ್‌ಕೆಜಿಯಿಂದ ಪದವಿವರೆಗಿನ 155 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಧರ್ಮಗುರು ಹಾಗೂ ಸಂತ ಅನ್ನಮ್ಮ ಪಿ.ಯು. ಕಾಲೇಜಿನ ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು, ಮದರ್ ಥೆರೇಸಾ ಸೇವಾ ಕೇಂದ್ರದ ಉಪಾಧ್ಯಕ್ಷ ಮಾರ್ಟಿನ್ ಬರ್ನಾಡ್, ಕಾರ್ಯದರ್ಶಿ ಅನಿತಾ ನೋರೋನ, ಖಜಾಂಚಿ ಜೇಮ್ಸ್ ಮೆನೇಜಸ್, ಜಂಟಿ ಕಾರ್ಯದರ್ಶಿ ಅರುಣಾ ಡಿ ಸೋಜಾ ಹಾಗೂ ಸದಸ್ಯರು, ವಿದ್ಯಾರ್ಥಿಗಳು, ಪಾಲಕರು ಇದ್ದರು.