

ಸೋಮವಾರಪೇಟೆ: ರಕ್ತದಾನದಿಂದ ಮೂರು ಜೀವಗಳನ್ನು ಉಳಿಸುವುದರೊಂದಿಗೆ, ದಾನಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸೋಮವಾರಪೇಟೆ ಜೆಎಂಎಫ್‌ಸಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಗೋಪಾಲಕೃಷ್ಣ ಹೇಳಿದರು.
ಜೇಸಿಐ ಸೋಮವಾರಪೇಟೆ ಪುಷ್ಪಗಿರಿ, ಕೊಡಗು ಜಿಲ್ಲಾ ರಕ್ತನಿಧಿ ಘಟಕ ಮತ್ತು ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಮಂಗಳವಾರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ದೇಹವು ಪುನರುಜ್ಜೀವಗೊಳ್ಳುತ್ತದೆ ಮತ್ತು ಹೊಸಕೋಶಗಳನ್ನು ಉತ್ಪಾದಿಸುತ್ತದೆ ಮತ್ತು ಅದನ್ನು ತಾಜಾಗೊಳಿಸುತ್ತದೆ. ರಕ್ತದಾನ ಮಾಡುವುದಕ್ಕೆ ಅವಕಾಶ ಸಿಕ್ಕಾಗ ಅರೋಗ್ಯವಂತರು ರಕ್ತದಾನ ಮಾಡಬೇಕು. ನಾನು ಕೂಡ ರಕ್ತದಾನಿ ಎಂದು ಹೇಳಿದರು.
ಶರೀರದಲ್ಲಿ ರಕ್ತದ ಚಲನೆಯಿಲ್ಲದೆ ಬದುಕಲು ಸಾಧ್ಯವಿಲ್ಲ. ಅಪಘಾತ, ಶಸ್ತ್ರಚಿಕಿತ್ಸೆ, ರಕ್ತಹೀನತೆ, ಸಾಂಕ್ರಾಮಿಕ ರೋಗಗಳು ತುತ್ತಾದ ಸಂದರ್ಭ ರಕ್ತದ ಅವಶ್ಯಕತೆ ಇರುತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದಿದ್ದರೆ ಜೀವಕ್ಕೆ ಅಪಾಯವಿರುತ್ತದೆ. ರಕ್ತದಾನಿಗಳೇ ಅವರ ಜೀವವನ್ನು ಉಳಿಸಬೇಕು. ರಕ್ತದಾನದ ಬಗ್ಗೆ ಜಾಗೃತಿ ಮೂಡಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಕರುಂಬಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯ ಯಾವುದು ಇಲ್ಲ. ರಕ್ತದಾನಿಗಳೇ ರಕ್ತವನ್ನು ನೀಡಬೇಕಾಗಿದೆ. ಡೆಂೆ, ಅಪಘಾತ, ಹೆರಿಗೆ ಸೇರಿದಂತೆ ಅನೇಕ ಕಾರಣಗಳಿಗೆ ಜಿಲ್ಲಾಸ್ಪತ್ರೆಗೆ ಹೆಚ್ಚಿನ ರಕ್ತದ ಬೇಡಿಕೆಯಿದೆ. ಜಿಲ್ಲೆಯ ಸಂಘ, ಸಂಸ್ಥೆಗಳು ರಕ್ತದ ಬೇಡಿಕೆಯನ್ನು ಪೂರೈಸುತ್ತಿದ್ದಾರೆ. ಅವರಿಗೆ ರಕ್ತನಿಧಿ ಘಟಕ ಚಿರಋಣಿಯಾಗಿದೆ. ರಕ್ತದ ಕೊರತೆಯಿಂದ ಯಾರು ಜೀವ ಕಳೆದುಕೊಳ್ಳಬಾರದು. ಇನ್ನು ಹೆಚ್ಚಿನ ದಾನಿಗಳು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
ರಕ್ತದಾನದ ಬಗ್ಗೆ ಭಯ, ಮೂಢನಂಬಿಕೆ, ಕೀಳರಿಮೆ ಬೇಡ. ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಚಾವಾಗಬಹುದು. ಜತೆಯಲ್ಲಿ ಅರೋಗ್ಯ ವೃದ್ಧಿಸುತ್ತದೆ. ಕೊಟ್ಟ ರಕ್ತ 24 ಗಂಟೆಗಳಲ್ಲಿ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಆರೋಗ್ಯವಂತರು 3 ತಿಂಗಳಿಗೊಮ್ಮೆ ಯಾವುದೇ ಆತಂಕವಿಲ್ಲದೆ ರಕ್ತದಾನ ಮಾಡಬಹುದು ಎಂದು ಹೇಳಿದರು.
ಹೆಚ್ಚು ಬಾರಿ ರಕ್ತದಾನ ಮಾಡಿದ ಫೋಟೋಗ್ರಾಫರ್ ಸಾಲೋಮನ್ ಡೇವಿಡ್, ವಕೀಲರಾದ ಎನ್.ಆರ್.ರೂಪಾ ಅವರನ್ನು ಸನ್ಮಾನಿಸಲಾಯಿತು. ಜೇಸಿಐ ಅಧ್ಯಕ್ಷ ಎಸ್.ಆರ್.ವಸಂತ್, ಬಿಟಿಸಿಜಿ ಕಾಲೇಜಿನ ಪ್ರಾಂಶುಪಾಲರಾದ ಧನಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್‌ಗೌಡ, ಸಹಾಯಕ ಆಡಳಿತಾಧಿಕಾರಿ ಮೀನಾಕ್ಷಿ, ಸಂಸ್ಥೆಯ ಕಾರ್ಯದರ್ಶಿ ಜಗದಾಂಬ ಇದ್ದರು. 64 ಮಂದಿ ರಕ್ತದಾನ ಮಾಡಿದರು.