ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ

23blrp5
ಬೇಲೂರಿನ ಲಯನ್ಸ್ ಸಂಸ್ಥೆ, ಎಂ.ಆರ್.ವೆಂಕಟೇಶ್ ಗೆಳೆಯರ ಬಳಗ ಹಾಗೂ ಹಾಸನ ಹಿಮ್ಸ್ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಕಣ್ಣು(ನೇತ್ರ) ದಾನ ಶಿಬಿರದಲ್ಲಿ ಹೆಸರು ನೋಂದಾಯಿಸಿದವರಿಗೆ ಪ್ರಶಂಸನಾ ಪತ್ರ ನೀಡಲಾಯಿತು.
Published on

ಬೇಲೂರು: ಲಯನ್ಸ್ ಸಂಸ್ಥೆ, ಎಂ.ಆರ್.ವೆಂಕಟೇಶ್ ಗೆಳೆಯರ ಬಳಗ ಹಾಗೂ ಹಾಸನ ಹಿಮ್ಸ್ ಆಸ್ಪತ್ರೆ ಸಹಯೋಗದೊಂದಿಗೆ ಶುಕ್ರವಾರ ಪಟ್ಟಣದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಉಚಿತ ನೇತ್ರದಾನ ಶಿಬಿರ ಆಯೋಜಿಸುವ ಮೂಲಕ ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ತಮ್ಮ ಪುತ್ರಿ ರೇವತಿ ಪ್ರಿಯಾರ ಹುಟ್ಟುಹಬ್ಬ ಆಚರಿಸಿದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ನೇತ್ರದಾನದಿಂದ ಒಂದು ಜೀವವನ್ನು ಉಳಿಸುವುದರ ಜತೆಗೆ ನಾವು ನಮ್ಮ ಕಣ್ಣುಗಳಿಂದಲೇ ಎಲ್ಲವನ್ನೂ ನೋಡುವ ಭಾಗ್ಯ ಕಣ್ಣಿಲ್ಲದವರಿಗೆ ಸಿಗುತ್ತದೆ. ಮನುಷ್ಯನಿಗೆ ನೇತ್ರ ಅತ್ಯವಶ್ಯಕ. ಒಂದು ಕೈ ಇಲ್ಲದಿದ್ದರೂ ಪರವಾಗಿಲ್ಲ. ಕಣ್ಣಿಲ್ಲದಿದ್ದರೆ ಜೀವನ ಮಾಡುವುದೇ ಕಷ್ಟ. ಕಣ್ಣಿಲ್ಲದವರಿಗೆ ಕಣ್ಣು(ನೇತ್ರ) ಅಳವಡಿಸಿದರೆ ಅವರಿಗೂ ಪ್ರಪಂಚ ನೋಡುವ ಭಾಗ್ಯ ಸಿಗುವಂತಾಗಲೂ ಇಂತಹ ನೇತ್ರದಾನದಿಂದ ಮಾತ್ರ ಸಾಧ್ಯ. ಆದರೆ ಮನುಷ್ಯ ಸತ್ತ ನಂತರ ಅವರ ಕಣ್ಣು ದೇಹದೊಂದಿಗೆ ಮಣ್ಣಲ್ಲಿ ಮಣ್ಣಾಗುವುದರಿಂದ ಯಾರಿಗೂ ಯಾವ ಪ್ರಯೋಜನವಿಲ್ಲ. ಕೆಲವರು ತಮ್ಮ ದೇಹದ ಅಂಗಾಂಗ, ಕಿಡ್ನಿ, ದೇಹದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ. ಮನುಷ್ಯ ಸತ್ತ ಮೇಲೂ ಬೇರೆಯವರಿಗೆ ಉಪಯೋಗವಾಗಬೇಕಾದರೆ ಆರೋಗ್ಯವಂತ ಮನುಷ್ಯನು ಕಣ್ಣು(ನೇತ್ರ)ದಾನ ಮಾಡುವುದು ಉತ್ತಮ ಬೆಳವಣಿಗೆ. ಆದರೆ ಇಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ತಮ್ಮ ಮಗಳು ರೇವತಿ ಪ್ರಿಯಾ ಹುಟ್ಟುಹಬ್ಬವನ್ನು ತಮ್ಮ ಕುಟುಂಬ ಸದಸ್ಯರೆಲ್ಲರೂ ನೇತ್ರದಾನ ಮಾಡಲು ಸಹಿ ಹಾಕುವ ಮೂಲಕ ಮಾನವೀಯತೆ ಮೆರೆದಿರುವುದು ಇತರರಿಗೆ ಮಾದರಿಯಾಗಿದೆ. ಎಲ್ಲರೂ ನೇತ್ರದಾನ ಮಾಡಲು ಮುಂದಾಗಬೇಕು ಎಂದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಕೆಲವರು ತಮ್ಮ ಹುಟ್ಟುಹಬ್ಬವನ್ನು ವಿನಾಕಾರಣ ತೋರ್ಪಡಿಕೆಗಾಗಿ ದುಂದುವೆಚ್ಚದ ಮೂಲಕ ಆಚರಿಸುತ್ತಾರೆ. ಆದರೆ ಮನಷ್ಯನಿಗೆ ಅಗತ್ಯವಾಗಿ ಬೇಕಾದ ಅಂಗವೆಂದರೆ (ಕಣ್ಣು)ನೇತ್ರ. ಇಂದು ಎಂ.ಆರ್.ವೆಂಕಟೇಶ್ ಅವರು ತಮ್ಮ ಪುತ್ರಿಯ ಹುಟ್ಟುಹಬ್ಬವನ್ನು ನೇತ್ರದಾನ ಶಿಬಿರ ಆಯೋಜಿಸಿ ಆಚರಿಸುತ್ತಿರುವುದು ಅರ್ಥ ಪೂರ್ಣವಾಗಿದ್ದು, ಪ್ರತಿಯೊಬ್ಬರೂ ನೇತ್ರದಾನಕ್ಕೆ ಮುಂದಾಗುವ ಮೂಲಕ ಅಂದರ ಬಾಳಿಗೆ ಬೆಳಕಾಗಬೇಕು ಎಂದರು.

ನೇತ್ರದಾನ ಶಿಬಿರದಲ್ಲಿ 109 ಜನರು ಹೆಸರು ನೋಂದಾಯಿಸಿದ್ದು ಹುಟ್ಟುಹಬ್ಬಕ್ಕೆ ಮೆರುಗು ನೀಡಿತು. ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಪೂವಯ್ಯ, ಸದಸ್ಯ ಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ತೀರ್ಥಕುಮಾರಿ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಪುರಸಭೆ ಉಪಾಧ್ಯಕೆ ಉಷಾ, ಸದಸ್ಯರಾದ ಜಮಲುದ್ದಿನ್, ರತ್ನ, ಅಕ್ರಮ್, ಸೌಮ್ಯ, ಕಾಂಗ್ರೆಸ್ ಮುಖಂಡರಾದ ಜುಬೆರ್, ಗೋಪಿನಾಥ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net