ಕೆಐಎನಲ್ಲಿ ನಾಯಿಗಳ ಉಪಟಳ:ವಿಮಾನ ಪ್ರಯಾಣಿಕರಿಗೆ ಕಿರಿಕಿರಿ

dog
Published on

ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಾಯಿಗಳ ಉಪಟಳ ಮಿತಿ ಮೀರಿದ್ದು, ಇದರಿಂದಾಗಿ ಪ್ರತಿನಿತ್ಯ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ನಿಲ್ದಾಣದ ಟರ್ಮಿನಲ್​​​​ನಲ್​ 1ರಲ್ಲಿ ದೇಶೀಯ ವಿಮಾನಗಳು, ಟರ್ಮಿನಲ್​​​​ನಲ್​-2ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. ವಿಶ್ವದಲ್ಲೇ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಕೆಐಎ ಸಹ ಗುರುತಿಸಿಕೊಂಡಿದೆ. ಅಪೂರ್ವ ವಿನ್ಯಾಸ, ವಾಸ್ತುಶಿಲ್ಪವನ್ನು ಹೊಂದಿರುವ ನಿಲ್ದಾಣಗಳ ಪೈಕಿ ಕೆಐಎ ಸಹ ಒಂದಾಗಿದೆ. ಆದರೆ, ಟರ್ಮಿನಲ್​​​​ನಲ್​-1, 2ನಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿದ್ದರಿಂದ ಪ್ರಯಾಣಿಕರು ಆತಂಕದಲ್ಲೇ ಓಡಾಡುವಂತಾಗಿದೆ.

ಈ ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ), ರೇಬಿಸ್​ ರೋಗನಿರೋಧಕ ಲಸಿಕೆ (ಎಆರ್​ವಿ) ಹಾಕಿಲ್ಲ. ನಾಯಿಗಳ ಸಂತಾನ ಕಡಿಮೆಯಾಗಿಲ್ಲ. ಬೀದಿ ವ್ಯಾಪಾರಿ, ಹೋಟೆಲ್​ಗಳು, ಕಲ್ಯಾಣ ಮಂಟಪ, ದೇವಸ್ಥಾನಗಳ ಬಳಿ ಸುರಿಯುತ್ತಿದ್ದ ತ್ಯಾಜ್ಯದಲ್ಲಿ ಕೆಲ ನಾಯಿಗಳು ಆಹಾರ ಹುಡುಕಿ ತಿನ್ನುತ್ತವೆ. ಇನ್ನೂ ಕೆಲವು ನಾಯಿಗಳು ಮಾಂಸ ತ್ಯಾಜ್ಯ ತಿಂದು ಆಕ್ರಮಣಕಾರಿಯಾಗಿವೆ. ವಿಮಾನ ನಿಲ್ದಾಣದಲ್ಲಿ ಓಡಾಡುವಾಗ ಏನಾದರೂ ಕಚ್ಚಿದರೆ ರೇಬಿಸ್​ ಸೋಂಕು ಹಬ್ಬುವ ಆತಂಕ ಮನೆಮಾಡಿದೆ. ಒಂದು ಗುಂಪುನಲ್ಲಿ ಐದಾರು ನಾಯಿಗಳು ಕಾಣಿಸಿಕೊಳ್ಳುತ್ತಿವೆ. ಏಕಾಏಕಿ ಎಲ್ಲ ನಾಯಿಗಳು ದಾಳಿ ನಡೆಸಿದರೆ ಪ್ರಯಾಣಿಕರ ಜೀವಕ್ಕೆ ಕುತ್ತು ಬರಲಿದೆ. ಅಲ್ಲದೆ, ರಾತ್ರಿ ವೇಳೆ ಸಂಚರಿಸುವವರ ಮೇಲೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸುತ್ತಿವೆ. ನಾಯಿಗೆ ಹೆದರಿ ಚಲಿಸುವ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.

ಹಲವರ ಆಕ್ರೋಶ: ನಾಯಿಗಳ ಉಪಟಳದ ಬಗ್ಗೆ ಸಾಕಷ್ಟು ಪ್ರಯಾಣಿಕರು "ಎಕ್ಸ್​' ಜಾಲತಾಣದಲ್ಲಿ ದೂರು-ದುಮ್ಮಾನ ಹಂಚಿಕೊಂಡು ವಿಮಾನ ನಿಲ್ದಾಣದ ಆಡಳಿತ ಮಂಡಳಿ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಈ ಬಗ್ಗೆ ಮಂಡಳಿ ಎಚ್ಚೆತ್ತುಗೊಂಡಿಲ್ಲ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಒತ್ತು ನೀಡಬೇಕು. ಸಣ್ಣ ಮಕ್ಕಳು ಪ್ರಯಾಣಿಸುತ್ತಿರುತ್ತಾರೆ. ವಿಮಾನ ತಪ್ಪುವ ಭಯದಿಂದ ಅವಸರದಲ್ಲಿ ತೆರಳುತ್ತಿದ್ದಾರೆ. ಈ ವೇಳೆ ನಾಯಿ ಕಚ್ಚಿದರೆ ಗತಿ ಏನು? ಬಿಡಾಡಿ ದನಗಳು ಓಡಾಡುವ ದಿನಗಳು ದೂರವಿಲ್ಲ ಎಂದು ಕೆಲ ಪ್ರಯಾಣಿಕರು, "ಎಕ್ಸ್​'ನಲ್ಲಿ ಮಂಡಳಿಯ ಕಾರ್ಯವೈಖರಿ ಬಗ್ಗೆ ಸಿಟ್ಟು ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net