

ಬೆಂಗಳೂರು: ಸಹವರ್ತಿನ್ ಅನಿಮಲ್ ವೆಲ್ಫೇರ್ ಟ್ರಸ್ಟ್ ಸೇರಿ ಇತರೆ ಸಂಸ್ಥೆಗಳ ಸಹಯೋಗದಲ್ಲಿ ಬಿಬಿಎಂಪಿ, ಅ.17ರಂದು ನಗರದಲ್ಲಿ "ಶ್ವಾನ ಉತ್ಸವ' ಆಯೋಜಿಸಿದೆ.
ಮಾನವ-ಪ್ರಾಣಿ ಸಂಘರ್ಷ ತಗ್ಗಿಸಲು, ಕಡಿತ, ದಾಳಿ ಭಯವನ್ನು ಹೋಗಲಾಡಿಸಲು, ಶ್ವಾನಗಳ ಕೊಡುಗೆ ಬಗ್ಗೆ ಪರಿಚಯಿಸಲು ಪಾಲಿಕೆ, ಬರುವ ದಿನಗಳಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಅದರಂತೆ, "ಶ್ವಾನ ಉತ್ಸವ'ದಲ್ಲಿ ಶ್ವಾನಗಳೊಂದಿನ ಪ್ರೀತಿ, ಬಾಂಧವ್ಯ ವಿಚಾರಗಳ ಬಗ್ಗೆ ಸಾರ್ವಜನಿಕರು ಹಂಚಿಕೊಳ್ಳಬಹುದು. ಆಯಾ ವಾರ್ಡ್ನಲ್ಲಿ ಸ್ವಯಂಸೇವಕರಾಗಿ ಎಲ್ಲ ಉಪಕ್ರಮಗಳಲ್ಲಿ ಭಾಗಿಯಾಗಲು ಕ್ಯೂಆರ್ ಕೋಡ್ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಉತ್ಸವ ದಿನದಂದು ಆಯಾ ವಾರ್ಡ್ನ ರೆಸ್ಟೋರೆಂಟ್ಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತದೆ. ಸಮುದಾಯದ ನಾಯಿಗಳಿಗೆ ಆಹಾರ ನೀಡುವಂತೆ ಪ್ರೇರೇಪಿಸಲು ಪೌರಕಾರ್ಮಿಕರ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಆಹಾರ ನೀಡುವ ಕಾರ್ಯ ಆರಂಭವಾಗಲಿದೆ.
ಪಾಲಿಕೆಯ ಪಶುಸಂಗೋಪನಾ ವಿಭಾಗದ ಸುರಳ್ಕರ್ ವಿಕಾಶ್ ಕಿಶೋರ್ ಮಾತನಾಡಿ, ಪ್ರಾಣಿಗಳೊಂದಿಗೆ ಸಾಮರಸ್ಯ ಸಹಬಾಳ್ವೆ ಸುತ್ತಮುತ್ತಲಿನ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಅನುಕೂಲವಾಗಲಿದೆ. ಪ್ರಾಣಿಗಳೊಂದಿಗಿನ ಸಂಘರ್ಷ ಮತ್ತು ರೇಬೀಸ್ ತಡೆಗೆ ಹಲವು ಕ್ರಮ ಕೈಗೊಂಡಿದ್ದರೂ ಸಮಾಜಕ್ಕೆ ನಾಯಿಗಳ ಸಕಾರಾತ್ಮಕ ಕೊಡುಗೆ ಕುರಿತು ಅರಿವು ಮೂಡಿಸಲು ಉತ್ಸುಕರಾಗಿದ್ದೇವೆ ಎಂದರು. ಹೆಚ್ಚಿನ ಮಾಹಿತಿಗೆ 1533 ಸಂಪರ್ಕಿಸಬಹುದು.