ಗಣತಿಗಾಗಿ ತೆರಳಿದ್ದ ಶಿಕ್ಷಕಿ ಮೇಲೆ ನಾಯಿ ದಾಳಿ

7blrp1
ಜಾತಿ ಗಣತಿಗೆಂದು ದ್ವಿಚಕ್ರ ವಾಹನದಲ್ಲಿ ತೆರಳಿದ ಸಂದರ್ಭ ನಾಯಿಯೊಂದು ಅಟ್ಟಾಡಿಸಿ ಕಚ್ಚಿದ್ದರಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತಿದ್ದ ಶಿಕ್ಷಕಿಯ ಆರೋಗ್ಯವನ್ನು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ವಿಚಾರಿಸಿದರು.
Published on

ಬೇಲೂರು: ಎರಡು ದಿನಗಳ ಹಿಂದಷ್ಟೇ ಜಾತಿ ಗಣತಿ ಸಂದರ್ಭ ಬೀದಿ ನಾಯಿ ಕಚ್ಚಿ ಶಿಕ್ಷಕಿ ಸೇರಿದಂತೆ ಆರು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಮಾಸುವ ಮುನ್ನವೇ, ಗಣತಿಗೆಂದು ಮತ್ತೊಬ್ಬ ಶಿಕ್ಷಕಿ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ಸಂದರ್ಭ ನಾಯಿಯೊಂದು ಅಟ್ಟಾಡಿಸಿ ಕಚ್ಚಿದ್ದರಿಂದ ಬಿದ್ದು ಗಾಯಗೊಂಡಿರುವ ಘಟನೆ ತಾಲೂಕಿನ ಗೆಂಡೇಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೇಲೂರು ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಬೀದಿ ನಾಯಿ 6 ಜನರಿಗೆ ಕಚ್ಚಿ ಗಂಭಿರವಾಗಿ ಗಾಯಗೊಳಿಸಿದ್ದರಿಂದ ಎಲ್ಲ ಗಾಯಾಳುಗಳನ್ನು ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಅದೇ ದಿನ ತಾಲೂಕಿನ ಗೆಂಡೇಹಳ್ಳಿ ಹಾಗೂ ಬಸ್ಕಲ್‌ನಲ್ಲಿ ಗಣತಿ ಮುಗಿಸಿಕೊಂಡು ಹಳೇ ಗೆಂಡೇಹಳ್ಳಿ ಗ್ರಾಮದಲ್ಲಿ ಸಂಜೆ 4 ಗಂಟೆ ಸಮಯದಲ್ಲಿ ಗಣತಿಗೆಂದು ಹೋದ ಗೆಂಡೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಶಿಕ್ಷಕಿ ಲುಬ್ನಾ ಎಂಬುವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋದಂತಹ ಸಂದರ್ಭ ನಾಯಿ ಇವರನ್ನು ಅಟ್ಟಾಡಿಸಿ ಬಂದು ಕಚ್ಚಿದ್ದರಿಂದ ಶಿಕ್ಷಕಿ ಲುಬ್ನಾ ಭಯದಿಂದ ದ್ವಿಚಕ್ರ ವಾಹನದಿಂದ ಕೆಳಕ್ಕೆ ಬಿದ್ದಿದರಿಂದ್ದ ಎಡಗೈ ಮೂಳೆ ಮುರಿದಿದೆ. ಕೆಲ ಸಮಯದ ನಂತರ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ವಿಷಯ ತಿಳಿದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಮತ್ತು ಇತರ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಶಿಕ್ಷಕಿಯ ಆರೋಗ್ಯ ವಿಚಾರಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ಎರಡು ದಿನಗಳ ಹಿಂದಷ್ಟೆ ಬೇಲೂರು ಪಟ್ಟಣದಲ್ಲಿ ಶಿಕ್ಷಕಿಯೊಬ್ಬರ ಮೇಲೆ ನಾಯಿಗಳು ದಾಳಿ ಮಾಡಿದ ಘಟನೆ ಇನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ ತಾಲೂಕಿನ ನಾಗೇನಹಳ್ಳಿಯಲ್ಲಿ ಲತಾ ಮತ್ತು ಗೆಂಡೇಹಳ್ಳಿಯಲ್ಲಿ ಲುಬ್ನಾ ಅವರ ಮೇಲೆ ನಾಯಿ ದಾಳಿ ಮಾಡಿವೆ. ಇದರಿಂದ ಇತರ ಶಿಕ್ಷಕರು ಮಾನಸಿಕವಾಗಿ ನೊಂದಿದ್ದಾರೆ. ಜತೆಗೆ ಈಗಾಗಲೇ ಸರ್ಕಾರ ನಿಗದಿಪಡಿಸಿರುವ ಗಣತಿಯನ್ನು ಶೇಕಡ 90ರಷ್ಟು ಮುಗಿಸಿದ್ದು, ಉಳಿದಿರುವ ಕೆಲವೇ ಮನೆಗಳಿಗೆ ತೆರಳುವ ಸಂದರ್ಭ ಇಂತಹ ಘಟನೆ ನಡೆಯುತ್ತಿದ್ದು, ಒಂಟಿ ಮನೆಗೆ ತೆರಳುವ ಸಂದರ್ಭದಲ್ಲಿ ಶಿಕ್ಷಕರು ಎಚ್ಚರಿಕೆ ವಹಿಸಬೇಕು ಎಂದರು. ಸರ್ಕಾರಿ ನೌಕರರ ಸಂಘದ ಮಾಜಿ ನಿರ್ದೇಶಕ ಗಂಗಾಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net