ಲೂಟಿಕೋರ, ಹಗರಣಗಳ ಸರ್ಕಾರ ರಾಜ್ಯಕ್ಕೆ ಬೇಕೆ?

ಬಾಗೇಪಲ್ಲಿಯ ಟಿ.ಬಿ.ಕ್ರಾಸ್‌ನಲ್ಲಿರುವ ಸೂರ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರನ್ನು ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಸನ್ಮಾನಿಸಿದರು, ಜೆಡಿಎಸ್ ಅಧ್ಯಕ್ಷ ಹರಿನಾಥರೆಡ್ಡಿ, ಒಕ್ಕಲಿಗರ ಸಂಘದ ನಿರ್ದೇಶಕ ಟಿ.ಕೋನಪರೆಡ್ಡಿ ಮತ್ತಿತರರು ಇದ್ದರು.
11 BPL 1 MP NEWS PHOTO (2)
ಬಾಗೇಪಲ್ಲಿಯ ಟಿ.ಬಿ.ಕ್ರಾಸ್‌ನಲ್ಲಿರುವ ಸೂರ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರನ್ನು ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಸನ್ಮಾನಿಸಿದರು, ಜೆಡಿಎಸ್ ಅಧ್ಯಕ್ಷ ಹರಿನಾಥರೆಡ್ಡಿ, ಒಕ್ಕಲಿಗರ ಸಂಘದ ನಿರ್ದೇಶಕ ಟಿ.ಕೋನಪರೆಡ್ಡಿ ಮತ್ತಿತರರು ಇದ್ದರು.
Published on

ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ ಎತ್ತಿನಹೊಳೆ ಕೈ ಸಾಧನೆ ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ದಕ್ಕೆ ಛೀಮಾರಿ



ಬಾಗೇಪಲ್ಲಿ: ಜನರ ದುಡ್ಡನ್ನು ಲೂಟಿ ಮಾಡಿ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿಕೊಂಡು ಮಜಾ ಮಾಡಲು ಕಾಂಗ್ರೆಸ್ ಸರ್ಕಾರದಲ್ಲಿ ಹಣ ಇದೆ. ರಾಜ್ಯದ ಅಭಿವೃದ್ಧಿ ಕಾರ್ಯಕ್ಕೆ, ಸರ್ಕಾರಿ ನೌಕರರಿಗೆ ವೇತನ ನೀಡಲು ಹಣ ಇಲ್ಲವಂತೆ. ಇಂತಹ ಲೂಟಿಕೋರ ಹಗರಣಗಳ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬೇಕೆ ಎಂದು ಸಂಸದ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಟಿ.ಬಿ. ಕ್ರಾಸ್‌ನಲ್ಲಿರುವ ಸೂರ್ಯ ಸಭಾಂಗಣದಲ್ಲಿ ಸಂಸದ
ಡಾ. ಕೆ. ಸುಧಾಕರ್ ಅವರಿಗೆ ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ
ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲ್ಲಿ ಮಾತನಾಡಿ, ಎತ್ತಿನಹೊಳೆ ಯೋಜನೆಯ ಮುಖ್ಯ ಉದ್ದೇಶ ಬಯಲುಸೀಮೆ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಪೂರೈಸುವುದಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ಬಳಿಯ ಒಂದು
ಭಾಗಕ್ಕೆ ನೀರು ಹರಿಸಿ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಸಾಧನೆ ಎಂದು ಬಿಂಬಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಡೆ ನಾಚಿಕೆಗೇಡಿನ
ಕೆಲಸ ಆಗಿದೆ. ಎತ್ತಿನಹೊಳೆ ಯೋಜನೆಯ ಒಂದು ಹನಿ ನೀರು ಬಯಲುಸೀಮೆ ಜಿಲ್ಲೆಗಳಿಗೆ ಹರಿಯದಿದ್ದರೂ ಈ ಭಾಗದ ಕಾಂಗ್ರೆಸ್ ಸಚಿವರು, ಶಾಸಕರು ಅಭಿನಂದನಾ ಸಮಾರಂಭ ಆಯೋಜಿಸಿ ಇದು ಕಾಂಗ್ರೆಸ್ ಸರ್ಕಾರದ ಸಾಧನೆ
ಎಂದು ಪ್ರಚಾರ ಗಿಟ್ಟಿಸಿಕೊಳ್ಳಲು ಮನಸ್ಸಾದರೂ ಹೇಗೆ ಬಂತು ಎನ್ನುವುದೇ ಪ್ರಶ್ನೆಯಾಗಿದೆ ಎಂದು ಛೀಮಾರಿ ಹಾಕಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಹರಿನಾಥರೆಡ್ಡಿ ಮಾತನಾಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರ ದೌರ್ಜನ್ಯಕ್ಕೆ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ರಕ್ಷಣೆಗೆ ಸಂಸದರು ನಿಲ್ಲುತ್ತಾರೆ ಎಂಬುದನ್ನು ಮರೆಯಬೇಡಿ. ಕಾಂಗ್ರೆಸ್ ಶಾಸಕರ ದರ್ಪ ಏನಾದರೂ ಇದ್ದರೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಪ್ರದರ್ಶಿಸಲಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಮುಖಂಡರಾದ ಟಿ.ಕೋನಪರೆಡ್ಡಿ, ಜೆ.ಪಿ.ರೆಡ್ಡಿ, ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಕೆ.ಟಿ.ವೀರಾಂಜನೇಯ, ವಿ.ವೆಂಕಟಶಿವಾರೆಡ್ಡಿ, ಪಾವಜೇನಹಳ್ಳಿ ನಾಗರಾಜುರೆಡ್ಡಿ, ಗುಡಿಬಂಡೆ ಕೃಷ್ಣಾರೆಡ್ಡಿ, ಚೌಡರೆಡ್ಡಿ, ಮುರಳಿ ಕೃಷ್ಣ, ಎಸ್.ಆರ್.ಲಕ್ಷ್ಮೀನಾರಾಯಣ, ಆ.ನ.ಮೂರ್ತಿ, ಪಿ.ವಿ.ಮಧುಸೂದನರೆಡ್ಡಿ, ಎಲ್.ಭಾಸ್ಕರ್, ಛಲವಾದಿ ರಮೇಶ್, ಇನಾಯತ್, ಜೆಡಿಎಸ್‌ನ ವೆಂಕಟರೆಡ್ಡಿ ಇತರರು ಇದ್ದರು.

ಕೃಷ್ಣಾ ನದಿ ನೀರು ಹರಿಸಿ
ಕಾಂಗ್ರೆಸ್ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇದ್ದರೆ, ರಾಜ್ಯದ ಗಡಿಯಲ್ಲಿರುವ ಕೃಷ್ಣಾ ನದಿ ನೀರನ್ನು ಅತಿ ಕಡಿಮೆ ಅನುದಾನದಲ್ಲಿ ಅತ್ಯಂತ ವೇಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ 6 ತಿಂಗಳಲ್ಲಿ ಹರಿಸಬಹುದು. ಇದನ್ನು ಅನುಷ್ಠಾನಗೊಳಿಸಲಿ ಎಂದು ಡಾ.ಕೆ. ಸುಧಾಕರ್ ಸವಾಲು ಎಸೆದರು.

ಬಯಲುಸೀಮೆ ಬಗ್ಗೆ ಬದ್ಧತೆಯೇ ಇಲ್ಲ
ಬಿಜೆಪಿಯ ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದಾಗ ಬಿಡುಗಡೆಯಾದ 8 ಸಾವಿರ ಕೋಟಿ ರೂ. ಅನುದಾನದಲ್ಲಿ ನಡೆದಿರುವ ಕಾಮಗಾರಿಯನ್ನು ನಮ್ಮ ಸಾಧನೆ ಎನ್ನುವ ಕೀಳುಮಟ್ಟಕ್ಕೆ ರಾಜ್ಯ ಸರ್ಕಾರ ಇಳಿದಿದೆ. ಇದನ್ನು ಗಮನಿಸಿದರೆ ಬಯಲುಸೀಮೆ ಜನರ ಬಗ್ಗೆ ಇವರಿಗೆ ಎಷ್ಟು ಬದ್ಧತೆ ಇದೆ ಎಂಬುದು ಸಾಬೀತಾಗುತ್ತದೆ ಎಂದು ಸಂಸದರು ಕಿಡಿಕಾರಿದರು.

ಹಳೇ ಸ್ನೇಹಿತನನ್ನು ಮನೆಗೆ ಕಳಿಸುವುದು ಪಕ್ಕಾ!


ಕಾಂಗ್ರೆಸ್‌ಗೆ ಮತ ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಪೊಲೀಸರನ್ನು ಬಳಸಿಕೊಂಡು ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಅಟ್ರಾಸಿಟಿ, ರೌಡಿಶೀಟರ್ ಕೇಸು ಹಾಕಿಸುತ್ತಿರುವ ನನ್ನ ಹಳೇ ಸ್ನೇಹಿತನನ್ನು 2028ರ ಚುನಾವಣೆಯಲ್ಲಿ ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ಸಂಸದ ಡಾ.ಕೆ.ಸುಧಾಕರ್ ಅವರು ಶಾಸಕ ಎಸ್.ಎನ್. ಸುಬ್ಬಾರೆಡ್ಡಿಗೆ ಟಾಂಗ್ ನೀಡಿದರು.
ಪಟ್ಟಣದಲ್ಲಿ ಬುಧವಾರ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಶಾಸಕರು ಕ್ಷೇತ್ರದಲ್ಲಿ ರಾಜಕಾರಣ ಮಾಡಲಿ, ಅದಕ್ಕೆ ಆಕ್ಷೇಪ ಇಲ್ಲ. ಕಾಂಗ್ರೆಸ್‌ಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ಸುಳ್ಳು ಕೇಸುಗಳು ಹಾಕಿಸುವುದನ್ನು ಬಿಡಬೇಕು. ಶಾಸಕರ ಭೂ ಹಗರಣ ದಂಧೆಗೆ ಅಡ್ಡಿಯುಂಟು ಮಾಡುವ ರೈತರು, ಮಹಿಳೆಯರ ಮೇಲೆ ಸುಳ್ಳು ಅಟ್ರಾಸಿಟಿ ಕೇಸು ದಾಖಲಿಸುವುದು, ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಮೇಲೆ ರೌಡಿಶೀಟರ್ ಪ್ರಕರಣ ದಾಖಲಿಸಿರುವ ಬಗ್ಗೆ ಗಮನಕ್ಕೆ ಬಂದಿದೆ. ಸರ್ಕಾರಿ ಸಂಬಳ ಪಡೆಯುವ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸರು ನಮ್ಮ ಕಾರ್ಯಕರ್ತರನ್ನು ಬೆದರಿಸಿದರೆ ಠಾಣೆ ಮುಂದೆ ಜಮಾಯಿಸಿ ಹೋರಾಟ ನಡೆಸಲು ಸಿದ್ಧರಿದ್ದೇವೆ. ಕಾನೂನಿನ ಸಂಕಷ್ಟ ಎದುರಿಸಲು ನೀವು ಸಿದ್ಧವೇ ಎಂದು ಪೊಲೀಸರಿಗೆ ನೇರವಾಗಿ ಎಚ್ಚರಿಕೆ ನೀಡಿದರು.
ಹನ್ನೆರಡು ವರ್ಷಗಳ ಅವಧಿಯಲ್ಲಿ ಶಾಸಕ ಸುಬ್ಬಾರೆಡ್ಡಿ ಅವರು ಕ್ಷೇತ್ರದ ಅಭಿವೃಧ್ಧಿಗಾಗಿ ಧ್ವನಿ ಎತ್ತಿಲ್ಲ. ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ದ್ವೇಷ ಸಾಧಿಸುವ ಕೆಲಸ ಬಿಟ್ಟು ಈಗಾಲಾದರೂ ನಿದ್ದೆಯಿಂದ ಎದ್ದೇಳಿ ಸುಬ್ಬಾರೆಡ್ಡಿಯವರೇ, ಮುಂದಿನ ಮೂರು ವರ್ಷವಾದರೂ ಅಭಿವೃದ್ಧಿಯತ್ತ ಗಮನಹರಿಸಿ. ಬಾಗೇಪಲ್ಲಿ ಕ್ಷೇತ್ರದಲ್ಲಿ 78 ಸಾವಿರ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ನಮ್ಮ ಕಾರ್ಯಕರ್ತರನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಮನೆ ಹೋಗಲು ನೀವು ಸಿದ್ಧರಾಗಿ ಎಂದು ಭಾಷಣದುದ್ದಕ್ಕೂ ಸುಬ್ಬಾರೆಡ್ಡಿ ವಿರುದ್ಧ ಹರಿಹಾಯ್ದರು.

ಸಾರ್ವಜನಿಕರಿಂದ ದೂರು
ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಭೂ ಮಾಪನಾ ಹಾಗೂ ತಾಲೂಕು ಪಂಚಾಯಿತಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ಸಂಸದ ಡಾ.ಕೆ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು. ಬಾಗೇಪಲ್ಲಿ, ಚೇಳೂರು, ಗುಡಿಬಂಡೆ ತಾಲೂಕುಗಳ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net