

ಚಿಕ್ಕಬಳ್ಳಾಪುರ: ಅಂತು ಇಂತು ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಆರಂಭಿಸಿದ್ದು, ಇನ್ನಾದರೂ ನಾಯಿ ಕಡಿತ ಪ್ರಕರಣಗಳಿಗೆ ಕಡಿವಾಣ ಬೀಳುತ್ತದೆಯೇ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ಹೌದು, ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ನಾಯಿ ಕಡಿತ ಪ್ರಕರಣಗಳು ವಾರ್ಷಿಕ ಸರಾಸರಿ 5 ಸಾವಿರ ದಾಟಿದೆ. ಹಾಗೆಯೇ, ರೇಬಿಸ್ ಕಾಯಿಲೆಗೆ ವರ್ಷಕ್ಕೆ ಕನಿಷ್ಠ ಒಬ್ಬರಾದರೂ ಮೃತಪಡುತ್ತಿದ್ದು, ಸ್ಥಳೀಯ ಆಡಳಿತ ಸಂಸ್ಥೆಗಳ ಪರಿಹಾರ ಕೆಲಸಗಳು ಅವೈಜ್ಞಾನಿಕವಾಗಿವೆ. ಈಗ 6 ವರ್ಷಗಳ ಬಳಿಕ ಜಿಲ್ಲಾ ಕೇಂದ್ರದಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಅನುದಾನ ವೆಚ್ಚಕಷ್ಟೇ ಕೆಲಸ
ನಗರ, ಪಟ್ಟಣ ಪ್ರದೇಶಗಳಲ್ಲಿನ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ಗ್ರಾಪಂಗಳ ಬಹುತೇಕ ಕೆಲಸಗಳಲ್ಲಿ ಅನುದಾನ ಖರ್ಚು ಮಾಡುವ ಧೋರಣೆ ಮಾತ್ರ ಕಂಡು ಬರುತ್ತಿದೆ. ಸಮಸ್ಯೆ ಪರಿಹಾರ ಹಾಗೂ ನಿರೀಕ್ಷೆಯ ಕೆಲಸಗಳಿಗೆ ನಿಧಾನಗತಿಯ ಕ್ರಿಯಾಯೋಜನೆ, ಅನುದಾನದ ಸಮಸ್ಯೆ, ಟೆಂಡರ್ ಆಹ್ವಾನ ಮತ್ತು ಕಾಮಗಾರಿ ಪೂರ್ಣಗೊಳಿಸಲು ವರ್ಷಾನುಗಟ್ಟಲೇ ವಿಳಂಬವಾಗುತ್ತಿದ್ದು, ನಿರೀಕ್ಷೆಗೆ ಅನುಗುಣವಾಗಿ ಅನುಕೂಲಕರ ಎನಿಸುತ್ತಿಲ್ಲ. ತಾತ್ಕಾಲಿಕ ಪರಿಹಾರ ಹಾಗೂ ಶಾಶ್ವತ ಸಮಸ್ಯೆ ಎನ್ನುವಂತಾಗಿದೆ.
ವೈಜ್ಞಾನಿಕ ನಿರ್ವಹಣೆ ಅಗತ್ಯ
ಜಿಲ್ಲಾದ್ಯಂತ ಬೀದಿನಾಯಿಗಳ ಹಾವಳಿ ಇದೆ. ಪ್ರಮುಖ ರಸ್ತೆ, ವೃತ್ತ, ವಿವಿಧ ಬಡಾವಣೆಗಳಲ್ಲಿ ನಾಯಿಗಳ ದೊಡ್ಡ ಹಿಂಡು ಕಾಣಿಸುತ್ತದೆ. ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರು, ಅಪರಿಚಿತರು ಓಡಾಡುವಂತೆಯೇ ಇಲ್ಲ. ಅನೇಕ ಸವಾರರು ವಾಹನ ಸಮೇತ ಬಿದ್ದು ಗಂಭೀರವಾಗಿ ಗಾಯಗೊಂಡ ಪ್ರಕರಣಗಳಿಗೆ ಲೆಕ್ಕವಿಲ್ಲ. ನಾಯಿ ಕಡಿತಕ್ಕೆ ಆಸ್ಪತ್ರೆಗಳಿಗೆ ತೆರಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ಲಸಿಕೆ ಹಾಕುವ ಕೆಲಸ ಕೈಗೊಳ್ಳಬೇಕು. ಇದಕ್ಕೆ ಅಗತ್ಯ ಅನುದಾನ ಮೀಸಲಿಡಬೇಕು. ಅದರಲ್ಲೂ ವೈಜ್ಞಾನಿಕ ನಿರ್ವಹಣೆಗೆ ಒತ್ತು ನೀಡಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.
ಪ್ರಕರಣಗಳೆಷ್ಟು?
ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ 7279 ಜನರಿಗೆ ನಾಯಿ ಕಚ್ಚಿದ್ದು, ಮೂವರು ಕಾಯಿಲೆಯಿಂದ ಮೃತಪಟ್ಟಿದ್ದಾರೆ. 2023ನೇ ಸಾಲಿನಲ್ಲಿ 8605 ಮಂದಿ ನಾಯಿ ಕಡಿತಕ್ಕೆ ಒಳಪಟ್ಟು ಮೂವರು ಮೃತಪಟ್ಟಿದ್ದರೆ, 2024ನೇ ಸಾಲಿನಲ್ಲಿ (ನವೆಂಬರ್‌ವರೆಗೆ) 9715 ಜನರು ನಾಯಿಕಡಿತಕ್ಕೆ ಒಳಪಟ್ಟು ಒಬ್ಬರು ಮೃತ ಪಟ್ಟಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 20 ಲಕ್ಷ ರೂ.ಗೆ ಟೆಂಡರ್
ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಚಿಕ್ಕಬಳ್ಳಾಪುರ ನಗರಸಭೆ 20 ಲಕ್ಷ ರೂ. ಟೆಂಡರ್ ನೀಡಿದೆ.
ಒಂದು ನಾಯಿಗೆ ಶಸ್ತ್ರಚಿಕಿತ್ಸೆ ನಡೆಸಲು ತಲಾ 1650 ರೂ. ನಿಗದಿಪಡಿಸಿದ್ದು, ಪ್ರತಿನಿತ್ಯ ಕನಿಷ್ಠ 20 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದೆ. ಎರಡೂವರೆ ತಿಂಗಳ ಕಾಲ ಕಾರ್ಯಾಚರಣೆ ನಡೆಯಲಿದೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ
ಜಿಲ್ಲಾ ಕೇಂದ್ರದಲ್ಲಿ ಗುರುವಾರದಿಂದಲೇ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಅಭಿಯಾನ ಪ್ರಾರಂಭವಾಗಿದೆ.
ಅಸ್ರಾ ಪ್ರಾಣಿಗಳ ಕಲ್ಯಾಣ ಸಂಸ್ಥೆ ನೇತೃತ್ವದಲ್ಲಿ ನೇಪಾಳ ಮೂಲದ 7 ಸಿಬ್ಬಂದಿ ನಾಯಿ ಹಿಡಿಯುವ ಕೆಲಸದಲ್ಲಿ ತೊಡಗಿದ್ದಾರೆ. ನಗರದ ಸಿಟಿಜನ್ ಕ್ಲಬ್ ಕಟ್ಟಡವನ್ನು ನಾಯಿಗಳ ಶಸ್ತ್ರಚಿಕಿತ್ಸೆ, ಆರೈಕೆಗೆ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಪಶುವೈದ್ಯರು ಮತ್ತು ಸಿಬ್ಬಂದಿ ನಿಯೋಜಿಸಿದ್ದು ಶಸ್ತ್ರಚಿಕಿತ್ಸೆಗೊಳಗಾದ ನಾಯಿಯನ್ನು ಮೂರು ದಿನ ಆರೈಕೆ ಮಾಡಿ, ಬಳಿಕ ಅದನ್ನು ಹಿಡಿದ ಸ್ಥಳದಲ್ಲೇ ಬಿಡಲಾಗುತ್ತದೆ. ಹಂತ ಹಂತವಾಗಿ ನಗರದ ಎಲ್ಲ 31 ವಾರ್ಡುಗಳಲ್ಲೂ ಕಾರ್ಯಾಚರಣೆ ನಡೆಯಲಿದೆ.
ಅಧಿಕಾರಿಗಳಿಗೆ ಡಿಸಿ ಆದೇಶ
ಇತ್ತೀಚೆಗೆ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ನಾಯಿ ಕಡಿತ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಗಳಿಗೆ ಸೂಚಿಸಿದ್ದರು. ರೇಬೀಸ್ ಕಾಯಿಲೆ, ನಾಯಿ ಕಡಿತ ಪ್ರಕರಣಗಳು ಹಾಗೂ ಕಾಯಿಲೆಯಿಂದ ಮೃತಪಟ್ಟವರ ಬಗ್ಗೆ ಚರ್ಚಿಸಲಾಗಿತ್ತು. ಅದರಂತೆ ಈಗ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದೆ.