

ಹಾಸನ: ಐತಿಹಾಸಿಕ ಬೇಲೂರು ಚನ್ನಕೇಶವ ಸ್ವಾಮಿ ದೇವಸ್ಥಾನದ ರಥೋತ್ಸವ ವೇಳೆ ಕುರಾನ್ ಪಠನೆ ಬೇಕೋ ಬೇಡವೋ?!
- ಇಂಥದ್ದೊಂದು ಜಿಜ್ಞಾಸೆ ಇದೀಗ ಉಂಟಾಗಿದ್ದು, ಹಿಂದಿನ ಪದ್ಧತಿಯೊಂದನ್ನು ಮುಂದುವರಿಸಬೇಕೋ ಬೇಡವೋ ಎಂಬ ಗೊಂದಲವೂ ಉಂಟಾಗಿದೆ.
ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವ ಸಂದರ್ಭ ಕುರಾನ್ ಪಠನೆ ಮಾಡುವ ಪದ್ಧತಿ ಇದೆ. ಆದರೆ ಇದೀಗ ರಾಜ್ಯಾದ್ಯಂತ ಕೋಮುಸಂಘರ್ಷ ಉಂಟಾಗಿದ್ದು, ಅದೀಗ ದೇವಸ್ಥಾನಗಳವರೆಗೂ ತಲುಪಿದೆ. ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಹಿಂದುಯೇತರರಿಗೆ ಅಂಗಡಿ ಮುಂಗಟ್ಟು ನೀಡಬಾರದು ಎಂಬ ವಿಚಾರ ಹಲವು ದೇವಸ್ಥಾನಗಳಲ್ಲಿ ವಿವಾದವಾಗಿ ಮಾರ್ಪಟ್ಟಿದೆ.
ಇನ್ನು ನಾಳೆ ಬೇಲೂರು ದೇವಸ್ಥಾನದಲ್ಲಿ ರಥೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಪದ್ಧತಿಯಂತೆ ಕುರಾನ್ ಪಠನೆ ನಡೆಸಬೇಕೋ ಬೇಡವೋ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಗೊಂದಲದಲ್ಲಿ ಸಿಲುಕಿದೆ.
1932ರ ದೇಗುಲದ ಮ್ಯಾನುವಲ್ನಲ್ಲಿ ಕುರಾನ್ ಪಠನದ ಉಲ್ಲೇಖವಿದ್ದು, ರಥೋತ್ಸವ ವೇಳೆ ಮುಸ್ಲಿಂ ಕುಟುಂಬದವರು ಕುರಾನ್ ಪಠನೆ ಮಾಡುತ್ತಾರೆ. ಅದನ್ನು ಈ ಸಲ ಮುಂದುವರೆಸಬೇಕೇ ಬೇಡವೇ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಬೇಲೂರು ದೇಗುಲದ ಆಡಳಿತಾಧಿಕಾರಿ ವಿದ್ಯುಲ್ಲತಾ ಪತ್ರ ಬರೆದು ಸ್ಪಷ್ಟನೆ ಕೋರಿದ್ದಾರೆ.