

ಮೈಸೂರು: ಜಗತ್ತಿನಾದ್ಯಂತ ಆವರಿಸಿಕೊಂಡಿರುವ ಒಮಿಕ್ರಾನ್ ದೇಶದ ಹಲವು ರಾಜ್ಯಗಳಲ್ಲಷ್ಟೇ ಅಲ್ಲ, ಕರ್ನಾಟಕದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದೆ. ಅದರಲ್ಲೂ ಡೆಲ್ಟಾ ವೇರಿಯಂಟ್ಗಿಂತಲೂ ಒಮಿಕ್ರಾನ್ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದೂ ಹೇಳಲಾಗುತ್ತಿದೆ.
ಈ ಮಧ್ಯೆ ಹೊಸ ವರ್ಷ, ನಂತರದ ಹಬ್ಬ ಇತ್ಯಾದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಒಮಿಕ್ರಾನ್ ಪ್ರಕರಣ ಶೀಘ್ರದಲ್ಲೇ ತೀವ್ರಗತಿಯಲ್ಲಿ ಏರಬಹುದು ಎಂದೂ ಹೇಳಲಾಗುತ್ತಿದೆ. ಅಲ್ಲದೆ ಫೆಬ್ರವರಿಯಲ್ಲಿ ಒಮಿಕ್ರಾನ್ ಹೆಚ್ಚಾಗಲಿದೆಯೇ ಎಂಬುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಫೆಬ್ರವರಿಯಲ್ಲಿ ಒಮಿಕ್ರಾನ್ ಸೋಂಕು ಪ್ರಕರಣ ಹೆಚ್ಚಾಗುತ್ತದೆ ಎಂಬುದಕ್ಕೆ ಪೂರಕ ದಾಖಲೆಗಳಿಲ್ಲ, ಆ ಸಂಬಂಧ ಯಾವುದೇ ಸಂಶೋಧನೆಯೂ ನಡೆದಿಲ್ಲ. ಹೀಗಾಗಿ ಫೆಬ್ರವರಿಯಲ್ಲಿ ಒಮಿಕ್ರಾನ್ ಜಾಸ್ತಿ ಆಗಬಹುದು ಎನ್ನುವುದು ಅಂದಾಜು ಮಾತ್ರ. ಅದಾಗ್ಯೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ ಎಂದರು.