ಚನ್ನಪಟ್ಟಣದಲ್ಲಿ ನಡೆಯುವುದೇ ಡಿಕೆಶಿ ಜಾದು?

18_MYS_1_CHANNAPATANA TOYS TO HADI MAKKALU (1)
Published on

ಫಲಿಸುವುದೇ ಜನಸ್ಪಂದನ ಮಂತ್ರ ಡಿಸಿಎಂಗೆ ಕ್ಷೇತ್ರ ಗೆಲ್ಲುವ ಸವಾಲು

ಗಂಗಾಧರ್ ಬೈರಾಪಟ್ಟಣ ರಾಮನಗರ

ರಾಜ್ಯದ ಚಿತ್ತ ಈಗ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದತ್ತ ನೆಟ್ಟಿದೆ. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತವರು ಜಿಲ್ಲೆಯಲ್ಲಿ ಕ್ಷೇತ್ರವನ್ನು ಗೆಲ್ಲಲೇಬೇಕಾದ ಒತ್ತಡ ನಿರ್ಮಾಣವಾಗಿದೆ.

ಇದಕ್ಕಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಲವು ದಿನಗಳಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಎನ್ನುವ ಘೋಷ ವಾಕ್ಯದೊಂದಿಗೆ ಜನ ಸ್ಪಂದನ ಕಾರ್ಯಕ್ರಮಗಳ ಮೂಲಕ ಮತದಾರರ ಮನ ಗೆಲ್ಲುವ ಕಸರತ್ತು ನಡೆಸಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್ ಅವರ ಈ ತಂತ್ರ ಕ್ಷೇತ್ರದಲ್ಲಿ ಫಲಿಸುವುದೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ತಾಳೆಯೇ ಇಲ್ಲ:

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷೆಗೂ ಮೀರಿದ ಮತಗಳು ಸಂದಾಯವಾಗಿವೆ. ಆದರೆ, ಇದು ಅನಿರೀಕ್ಷಿತವಲ್ಲ, ನಿರೀಕ್ಷಿತವೇ ಎನ್ನುವುದನ್ನು 2013 ಮತ್ತು ನಂತರ ನಡೆದ ಚುನಾವಣೆಗಳು ಬಹಿರಂಗ ಪಡಿಸಿವೆ.

2013ರ ಲೋಕಸಭೆ ಉಪ ಸಮರದಿಂದ ಆರಂಭಗೊಂಡು 2024ರ ಸಮರದವರೆಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಅವರೇ ಸ್ಪರ್ಧೆ ಮಾಡಿದ್ದರು, ಪ್ರತಿ ಚುನಾವಣೆಯಲ್ಲಿಯೂ 70 ಸಾವಿರದಿಂದ ಒಂದು ಲಕ್ಷದವರೆಗೂ ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಲೋಕ ಸಮರಕ್ಕೂ ಮುನ್ನ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಇದಕ್ಕೆ ವ್ಯತಿರಿಕ್ತವಾಗಿದೆ. ಆದರೆ, 2013ರ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದಲ್ಲಿದ್ದ ಸಿ.ಪಿ.ಯೋಗೇಶ್ವರ್ ಬೆಂಬಲ ಪಡೆದಿದ್ದ ಡಿ.ಕೆ.ಸುರೇಶ್, 2019ರ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ 98350 ಮತ ಪಡೆದುಕೊಂಡಿದ್ದರು.

ಮೇಲೆ ಏಳಲೇ ಇಲ್ಲ

ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ನಂತರ ನಡೆದ ಎರಡು ಉಪಚುನಾವಣೆ ಹಾಗೂ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೈ ಕೊಡವಿ ನಿಂತೇ ಇಲ್ಲ. ಪ್ರತಿ ಚುನಾವಣೆ ಕಾಂಗ್ರೆಸ್ ಸಾಧನೆ 20 ಸಾವಿರ ಮತಗಳ ಆಸುಪಾಸು. ಎಚ್.ಎಂ.ರೇವಣ್ಣ ಅವರು 2018ಲ್ಲಿ ಗಳಿಸಿದ 30208 ಮತಗಳೇ 2009ರ ನಂತರ ಕಾಂಗ್ರೆಸ್ ವಿಧಾನಸಭೆ ಚುನಾವಣೆ ನಂತರದ ಅತಿ ಹೆಚ್ಚು ಗಳಿಕೆ ಆಗಿದೆ.

ಅಷ್ಟು ಸುಲಭವಲ್ಲ

ಕಳೆದ ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅಷ್ಟೊಂದು ತಲೆ ಕೆಡಿಸಿಕೊಳ್ಳದ ಡಿ.ಕೆ.ಶಿವಕುಮಾರ್ ಈಗ ಉಪಚುನಾವಣೆಗಾಗಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ, ಭರಪೂರ ಭರವಸೆಗಳನ್ನು ನೀಡುತ್ತಿದ್ದಾರೆ ಎನ್ನುವ ಪ್ರತಿ ಪಕ್ಷಗಳ ಟೀಕೆಗಳ ನಡುವೆಯೇ ಡಿ.ಕೆ.ಶಿವಕುಮಾರ್ ಈ ಬಾರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಆದರೆ ಇದು ಅಷ್ಟು ಸುಲಭವಲ್ಲ ಎನ್ನುವುದು ಅವರಿಗೂ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಅಖಾಡಕ್ಕೆ ಇಳಿದು ಅಭ್ಯಾಸ ಮಾಡುತ್ತಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಮುಖ್ಯ

ಸದ್ಯಕ್ಕೆ ಆಡಳಿತ ಮತ್ತು ಪ್ರತಿ ಪಕ್ಷಗಳೆರಡಲ್ಲೂ ಅಭ್ಯರ್ಥಿ ಆಯ್ಕೆ ಗೌಪ್ಯವಾಗಿಯೇ ಉಳಿದಿದೆ. ಆರಂಭದಲ್ಲಿಯೇ ಸ್ಪರ್ಧೆಯ ಬಗ್ಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ನಂತರ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ ಎಂದು ದಾಟಿಯನ್ನು ಬದಲಾಯಿಸಿದರು. ಅತ್ತ ಜೆಡಿಎಸ್- ಬಿಜೆಪಿ ಮೈತ್ರಿಯಲ್ಲಿಯೂ ಸಹ ಸಿ.ಪಿ.ಯೋಗೇಶ್ವರ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆಯಾದರೂ ಇದನ್ನು ಯಾರೂ ದೃಢಪಡಿಸುತ್ತಿಲ್ಲ. ಆದರೆ ಎರಡೂ ಕಡೆಯಿಂದಲೂ ಪ್ರಬಲ ಅಭ್ಯರ್ಥಿಗಳು ಸ್ಪರ್ಧೆ ಮಾಡಿದರಷ್ಟೇ ಕ್ಷೇತ್ರದ ಚುನಾವಣೆ ರಂಗು ಪಡೆದುಕೊಳ್ಳಲಿದೆ.

ಮೂರನೇ ಉಪಚುನಾವಣೆ

2008ರ ವಿಧಾನಸಭೆ ಚುನಾವಣೆ ನಂತರ ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಮೂರನೇ ಉಪಚುನಾವಣೆ ಇದಾಗಿದೆ. 2008ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಸಿ.ಪಿ.ಯೋಗೇಶ್ವರ್, ಬಿಜೆಪಿ ಸೇರ್ಪಡೆಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಸಿ.ಅಶ್ವತ್ಥ್ ಎದುರು ಸಿಪಿವೈ ಸೋಲು ಕಂಡಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಆಪರೇಷನ್ ಕಮಲದಿಂದಾಗಿ ಶಾಸಕ ಸ್ಥಾನಕ್ಕೆ ಎಂ.ಸಿ.ಅಶ್ವತ್ಥ್ ರಾಜೀನಾಮೆ ನೀಡಿದ್ದರಿಂದ 2011ರ ಮೇನಲ್ಲಿ ಮತ್ತೊಮ್ಮೆ ಬೈ ಎಲೆಕ್ಷನ್ ನಡೆದು ಈ ವೇಳೆ ಯೋಗೇಶ್ವರ್, ಜೆಡಿಎಸ್‌ನ ಸಿಂ.ಲಿಂ ನಾಗರಾಜು ಅವರ ವಿರುದ್ಧ ಗೆಲುವು ಸಾಧಿಸಿ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸಚಿವರೂ ಆಗಿದ್ದರು. ಈಗ ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ದಿನಾಂಕ ಘೋಷಣೆ ಆಗಬೇಕಿದೆ.

ಬೈ ಎಲೆಕ್ಷನ್ ಫಲಿತಾಂಶ

ವರ್ಷ ಕಾಂಗ್ರೆಸ್ ಜೆಡಿಎಸ್ ಬಿಜೆಪಿ

2009 17299 64517 62235

2011 12687 57472 75275

==

2013ರಿಂದ ವಿಧಾನಸಭೆ ಚುನಾವಣೆ ಫಲಿತಾಂಶದ ವಿವರ

ವರ್ಷ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಎಸ್‌ಪಿ

2013 8134 73635 --- 80099

2018 30208 87995 66465 ----

2023 15374 96592 80677 ----

====

2013 ರಿಂದ ಲೋಕ ಸಮರ

ವರ್ಷ ಕಾಂಗ್ರೆಸ್ ಜೆಡಿಎಸ್ ಬಿಜೆಪಿ

2013(ಬೈ )72894 59927 ---

2014 81224 54538 17018

2019 98350 ಕೈ ಮೈತ್ರಿ 61156

2024 85357 ಬಿ ಮೈತ್ರಿ 106971

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net