ದೊಡ್ಡಮುಲಗೂಡು ಸಹಕಾರ ಸಂಘ ಜೆಡಿಎಸ್ ತೆಕ್ಕೆಗೆ

ದೊಡ್ಡಮುಲಗೂಡು ಸಹಕಾರ ಸಂಘ ಜೆಡಿಎಸ್ ತೆಕ್ಕೆಗೆ
Published on

ಬನ್ನೂರು: ದೊಡ್ಡಮುಲಗೂಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘ 25ವರ್ಷಗಳ ನಂತರ ಜೆಡಿಎಸ್ ತೆಕ್ಕೆಗೆ ಬಂದಿದ್ದು, ಅಧ್ಯಕ್ಷರಾಗಿ ಅಂಕೇಗೌಡ ಮತ್ತು ಉಪಾಧ್ಯಕ್ಷರಾಗಿ ಕಲ್ಪನಾ ನಾಗರಾಜು ಆಯ್ಕೆಯಾದರು.

12 ಸದಸ್ಯರನ್ನೊಳಗೊಂಡ ದೊಡ್ಡಮುಲಗೂಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಗುರುವಾರ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಅಂಕೇಗೌಡ ಮತ್ತು ಗಿರೀಶ್ ನಾಮಪತ್ರ ಸಲ್ಲಿಸಿದ್ದು, ಗಿರೀಶ್ 5 ಮತ ಪಡೆದರೆ ಅಂಕೇಗೌಡ 7 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಲ್ಪನಾ ನಾಗರಾಜು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹಸೀನಾ ಪ್ರಕಟಿಸಿದರು.

ಅಧ್ಯಕ್ಷ ಅಂಕೇಗೌಡ ಮಾತನಾಡಿ, ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು. ಸರ್ಕಾರದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗಾಗಿ ವಿವಿಧ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಹಂತ-ಹಂತವಾಗಿ ಅವುಗಳನ್ನು ಅಳವಡಿಸಿಕೊಳ್ಳಲಾಗುವುದೆಂದರು.

ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್ ಅಭಿನಂದಿಸಿದರು. ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಸಿದ್ದರಾಮೇಗೌಡ, ಸುರೇಶ, ಶಶಿಕುಮಾರ್, ಪಂಚಲಿಂಗೇಗೌಡ, ಗೋವಿಂದ, ಶ್ರೀನಿವಾಸ್ ಗೌಡ, ಡಿ.ಆರ್. ಲೋಕೇಶ್, ಚನ್ನೇಗೌಡ, ಎಂ.ಕೆ. ಮಧು, ಕರಿಕೆಂಪೇಗೌಡ, ಅಂಬೇಡ್ಕರ್ ಸಂಘದ ಅಧ್ಯಕ್ಷ ಡಿ.ಎಂ.ಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net