ದೊಡ್ಡಬಾಣಗೆರೆ ಕೆರೆ ಒಡಲಿಗೆ ಕನ್ನ !

kere_ottuvari
Published on

ವಿಶೇಷ ವರದಿ

ಶಿರಾ: ತಾಲೂಕಿನ ದೊಡ್ಡಬಾಣಗೆರೆ ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಉತ್ತರ ಏಷ್ಯಾ, ಯೂರೋಪ್, ಹಿಮಾಲಯವು ಸೇರಿ ವಲಸೆ ಬರುವ ವಿದೇಶಿ ಹಕ್ಕಿಗಳ ಆಶ್ರಯ ತಾಣವೆನಿಸಿರುವ ದೊಡ್ಡಬಾಣಗೆರೆ ಕೆರೆಯ ಒಡಲಿಗೆ ಕನ್ನಹಾಕಲಾಗಿದೆ.

988 ಎಕರೆ ವಿಸ್ತೀರ್ಣ ಹೊಂದಿರುವ ದೊಡ್ಡಬಾಣಗೆರೆ ಕೆರೆ ಅಂಗಳದ 10-12 ಎಕರೆ ಅಂಗಳವನ್ನು ಕರೆತಿಮ್ಮನಹಳ್ಳಿ ವಾಸಿ ರಾಮಕೃಷ್ಣಪ್ಪ ಒತ್ತುವರಿ ಮಾಡಿಕೊಂಡಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಬಯಲಿಗೆಳದಿದ್ದಾರೆ.

ಕೆರೆಯ ದಕ್ಷಿಣ ಭಾಗ ಹಾಗು ಕೆರೆಗೆ ನೀರು ಬರುವ ದೊಡ್ದ ಹಳ್ಳದ ಭಾಗದಲ್ಲಿ ಆಳವಾದ ಟ್ರಂಚ್ ಹೊಡೆದು, ಎತ್ತರದ ಏರಿ ನಿರ್ಮಾಣ ಮಾಡಲಾಗಿದೆ. ಇದರಿಂದ ಕೆರೆಯ ನೀರು ಒತ್ತುವರಿ ಮಾಡಿ ಕೊಂಡಿರುವ ಜಾಗಕ್ಕೆ ನೀರು ಬಾರದಂತೆ 300 ಮೀಟರ್ ಉದ್ದ 100 ಮೀಟರ್ ಅಗಲಷ್ಟು ಬದು ನಿರ್ಮಿಸಲಾಗಿದೆ. ಅಕ್ರಮ ಒತ್ತುವರಿ ಜಾಗವನ್ನು ಸಮತಟ್ಟುಗೊಳಿಸಿ ಬಳಕೆಗೆ ಯೋಗ್ಯವನ್ನಾಗಿಸಿಕೊಂಡಿದ್ದಾರೆ.

ಜಲಮೂಲದ ದಿಕ್ಕೇ ಬದಲು: ಕೆರೆಯ ನೈಸರ್ಗಿಕ ಜಲಮೂಲದ ದಿಕ್ಕನ್ನೇ ಬದಲಿಸಿರುವುದು ಸಹ ಕಂಡುಬಂದಿದೆ. ದೊಡ್ಡ ಹಳ್ಳದ ದಿಕ್ಕನ್ನು ಬದಲಿಸಿ ಹಳ್ಳದ ಹೆಬ್ಬಾಗಿಲನ್ನು ಮುಚ್ಚಲಾಗಿದೆ. ಹಾಗಾಗಿ, ಮಳೆಯ ನೀರು ಸರಾಗವಾಗಿ ಕೆರೆಗೆ ಹರಿಯಲು ಅಡಚಣೆಯಾಗುತ್ತಿದೆ. ಅಲ್ಲದೆ, ನೀರು ನಿಲ್ಲುವ ಕೆರೆಯ ಅಂಗಳದ ಪ್ರಮಾಣ ಕಡಿಮೆಯಾಗುತ್ತದೆ.

ಮೀನ-ಮೇಷ: ಸಣ್ಣನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಗಮನಕ್ಕೆ ತಂದರೂ ಸಹ ಕೆರೆಯ ಅಂಗಳವನ್ನು ಅತಿಕ್ರಮಣ ಮಾಡಿದ ವ್ಯಕ್ತಿಗಳ ವಿರುದ್ಧ ಇಲ್ಲಿಯವರೆಗೆ ಯಾವುದೇ ಕಾನೂನು ಕ್ರಮ ತೆಗೆದು ಕೊಳ್ಳದೆ ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಬಿ.ವಿ.ಗುಂಡಪ್ಪ ದೂರಿದ್ದಾರೆ. ಸಾರ್ವಜನಿಕ ಜಾಗದಲ್ಲಿ ಅವೈಜ್ಞಾನಿಕವಾಗಿ ಕಂದಕಗಳನ್ನು ನಿರ್ಮಿಸಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರನ್ನು ಸರ್ಕಾರಿ ಭೂ ಕಬಳಿಕೆ ಕಾಯ್ದೆಯಡಿ ಹಾಗು ಜಲ ಸಂರಕ್ಷಣಾ ಕಾಯ್ದೆ ಅನ್ವಯ ಕಾನೂನು ಕ್ರಮ ತೆಗೆದುಕೊಂಡು ಕೆರೆಯ ಹಾನಿಯನ್ನು ಹಾಗು ಟ್ರಂಚ್ ಮುಚ್ಚಿಸಿ ಬದುವನ್ನು ಒತ್ತುವರಿದಾರರಿಂದಲೇ ಸಮಮಾಡಿಸಿ ಕೆರೆಯನ್ನು ಸಂರಕ್ಷಿಸಬೇಕೆಂಬುದು ವನ್ಯಜೀವಿ ಜಾಗೃತಿ ಸಂಸ್ಥೆ ಒತ್ತಾಯವಾಗಿದೆ.

6 ಹಳ್ಳಿಗಳ ರೈತರ ಕೃಷಿಗೆ, ಅಂತರ್ಜಲ ವೃದ್ದಿಗೆ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಮತ್ತು ಭಾವನತ್ಮಕವಾಗಿ ಜೀವನಾಡಿ ಎನಿಸಿರುವ ದೊಡ್ಡಬಾಣಗೆರೆ ಕೆರೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಉತ್ತರ ಏಷ್ಯಾ, ಯುರೋಪ್ ಅಲ್ಲದೆ ಹಿಮಾಲಯದ ತಪ್ಪಲಿನಿಂದಲು ಪಕ್ಷಿಗಳು ಇಲ್ಲಿಗೆ ವಲಸೆ ಬರಲಿದ್ದು ಇದೊಂದು ವಿಶೇಷ ತಾಣ ಎನಿಸಿದೆ. ಕೆರೆಯ ನೈಸರ್ಗಿಕ ಜಲಮೂಲವನ್ನೇ ದಿಕ್ಕಬದಲಿಸಲಾಗಿದೆ. ಬಿ.ವಿ.ಗುಂಡಪ್ಪ ಅಧ್ಯಕ್ಷ, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net