

ಬೆಟ್ಟದಪುರ: ಸಮೀಪದ ಕೂರಗಲ್ಲು ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಹಾಗೂ ಶ್ರೀ ಚಿಕ್ಕಮ್ಮ ತಾಯಿ ದೇವಸ್ಥಾನಗಳ ಉದ್ಘಾಟನೆ ಶುಕ್ರವಾರ ನಡೆಯಿತು.
ದೇವಸ್ಥಾನ ಉದ್ಘಾಟನೆ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯಿಂದಲೇ ದೇವಾಲಯದಲ್ಲಿ ವಾಸ್ತುಶಾಂತಿ, ಕಲಶ ಸ್ಥಾಪನೆ, ಪೂಜಾ ಮತ್ತು ಕುಂಭಾಭಿಷೇಕ ಪೂಜೆ ನೆರವೇರಿತು. ಶುಕ್ರವಾರ ಮುಂಜಾನೆ 3:30ಕ್ಕೆ ನೂರಾರು ಮಹಿಳೆಯರು ಸಮೀಪದ ಕೆರೆೆಯಿಂದ ಕಳಶಗಳನ್ನು ಹೊತ್ತು ತಂದರು. ನಂತರ ನೂತನ ವಿಗ್ರಹಗಳಿಗೆ 108 ಕುಂಭಗಳಲ್ಲಿದ್ದ ಪವಿತ್ರ ಜಲ, ಪಂಚಾಮೃತ, ಸುಗಂಧ ದ್ರವ್ಯಗಳಿಂದಗಳಿಂದ ಅಭಿಷೇಕ ನೆರವೇರಿಸಲಾಯಿತು. ಬೆಳಗ್ಗೆ 9 ರಿಂದ 10.30ರ ವೇಳೆ ಸಲ್ಲಿದ ಶುಭ ಮಿಥುನ ಲಗ್ನದಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಚಂಡಿಕಾ ಹೋಮ, ವಿಗ್ರಹಗಳಿಗೆ ನೇತ್ರೋನ್ಮೀಲನ, ಅಂಕುರಾರ್ಪಣೆ, ಕದಳಿ ಛೇದನ, ಮಹಾಮಂಗಳಾರತಿ ಜರುಗಿದವು. ದೊಡ್ಡಮ್ಮ, ಚಿಕ್ಕಮ್ಮ ತಾಯಿ ಸೇವಾ ಸಮಿತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.