ಕೋವಿಡ್ ಸಂಕಷ್ಟದಲ್ಲೂ ವೈದ್ಯರ ಸೇವೆ ಸ್ಮರಣೀಯ

oppo_2
oppo_2
Published on

ಮದ್ದೂರು: ವೈದ್ಯರು ಸಂಕಷ್ಟ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿ ಅವರ ಜೀವ ಉಳಿಸುತ್ತಿದ್ದಾರೆ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ನರಸಿಂಹಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಶಂಕರ್ ಪಾಟೀಲ್ ಹಾಲ್‌ನಲ್ಲಿ ಇತ್ತೀಚೆಗೆ ಸಂಗಾತಿ ಸಂಸ್ಮರಣೆ-4 ಬಿ.ಆರ್.ಗುಣಶ್ರೀ ಅವರ ಸಂಸ್ಮರಣೆ, ವೈದ್ಯರಿಗೆ ತವರಿನ ಸನ್ಮಾನ ಹಾಗೂ ಸಮರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಕೋವಿಡ್ ಸಂಕಷ್ಟದಲ್ಲೂ ವೈದ್ಯರು ತಮ್ಮ ಕುಟುಂಬ ಹಾಗೂ ಆರೋಗ್ಯವನ್ನು ಲೆಕ್ಕಿಸದೆ ಲಕ್ಷಾಂತರ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬಿರುವುದನ್ನು ಯಾರು ಮರೆಯುವಂತಿಲ್ಲ ಎಂದರು.

ಜಂಜಾಟದ ಬದುಕಿನಲ್ಲೂ ಹಾಗೂ ಬದಲಾದ ಜೀವನಶೈಲಿಯಿಂದ ಚಿಕ್ಕವಯಸ್ಸಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ರೋಗಗಳು ಬರುತ್ತಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ರೋಗ ಬಾರದಂತೆ ಪ್ರತಿನಿತ್ಯ ಯೋಗ, ಧ್ಯಾನ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಸಮಾಜ ಸೇವಕ ಟಿ.ಪಿ.ತಿಪ್ಪೂರು ಮನು ಅವರು ತಮ್ಮ ಸಂಗಾತಿ ಬಿ.ಆರ್.ಗುಣಶ್ರೀ ಅವರ ಹೆಸರಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಮೆಚ್ಚುಗೆಯ ವಿಷಯ ಎಂದರು.

ಸಮಾಜ ಸೇವಕ ತಿಪ್ಪೂರು ಮನು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನನ್ನ ಬಾಳ ಸಂಗಾತಿ ಬಿ.ಆರ್.ಗುಣಶ್ರೀ ಗರ್ಣಿಣಿಯಾಗಿದ್ದರು. ಈ ವೇಳೆ ಅವರು ಸೋಂಕಿಗೆ ಒಳಗಾದರು. ಈ ಸಂದರ್ಭದಲ್ಲಿ ವೈದ್ಯರು ದೇವರ ರೂಪದಲ್ಲಿ ಬಂದು ಸೂಕ್ತ ಚಿಕಿತ್ಸೆ ನೀಡಿದರೂ ಉಳಿಯಲಿಲ್ಲ. ಅದ ೆನನ್ನ ಕರುಳಬಳ್ಳಿ, ನನ್ನ ಮಗಳಾದ ಪುನರ್ವಿಕ ಎಂ ಗೌಡರನ್ನು ಸಾಕಷ್ಟು ಕಷ್ಟಪಟ್ಟು ಉಳಿಸಿಕೊಟ್ಟರು ಎಂದು ವೈದ್ಯರ ಸೇವೆಯನ್ನು ಸ್ಮರಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ನನ್ನ ಬಾಳ ಸಂಗತಿ ಹೆಸರಿನಲ್ಲಿ ವೈದ್ಯರಿಗೆ ಸನ್ಮಾನ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ತವರಿನ ಸನ್ಮಾನ: ಮಂಡ್ಯ ವೈದ್ಯಕೀಯ ಕಾಲೇಜಿನ ಪ್ರಸೂತಿ ತಜ್ಞರು ಡಾ.ಅರ್.ಮನೋಹರ, ಮಂಡ್ಯ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜಿನ ಮಕ್ಕಳ ತಜ್ಞರಾದ ಡಾ.ಮಂಜುನಾಥ್, ಸಹ ಪ್ರಾಧ್ಯಾಪಕ ಮಂಡ್ಯ ಡಾ.ಜಿ.ವಿ.ಅನಿಕೇತನ್, ಡಾ.ನರಸಿಂಹಸ್ವಾಮಿ, ಡಾ.ಶಿವಕುಮಾರ್, ವೈದ್ಯಕೀಯ ಮತ್ತು ಕಾಲೇಜಿನ ವೈದ್ಯಕೀಯ ಅಧೀಕ್ಷಕ, ರೇಡಿಯೋಲಾಜಿಸ್ಟ್ ಡಾ.ದೇವಿಕಾ, ಕೀಲು ಮತ್ತು ಮೂಳೆ ತಜ್ಞ ಡಾ.ಶಿವಪ್ರಸಾದ್, ಕೆ.ಹೊನ್ನಲಗೆರೆ ಪ್ರಾಥಮಿಕ ಆರೋಗ್ಯ ಕೆಂದ್ರದ ಆಡಳಿತಾಧಿಕಾರಿ ಡಾ.ಸುನಿಲ್ ಸೇರಿದಂತೆ ಹಲವು ವೈದ್ಯರನ್ನು ಸನ್ಮಾನಿಸಲಾಯಿತು.

ಪ್ರಗತಿಪರ ಚಿಂತಕ ನ.ಲಿ.ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನ್ಮೂಲ್ ನಿರ್ದೇಶಕ ಹರೀಶ್‌ಬಾಬು, ರಾಣಿ ಐಶ್ವರ್ಯ ಎಚ್.ಎಲ್.ಸತೀಶ್, ನಿವೃತ್ತ ಕಾರ್ಯಪಾಲಕ ಅಭಿಯಂತರ ಶಂಕರೆಗೌಡ, ವಿಮೋಚನಾ ಸಂಸ್ಥೆಯ ಹೂತಗೆರೆ ಜನಾರ್ಧನ, ಹುಲಿಗೆರೆ ಪುರ ರವಿ, ಚಾಮನಹಳ್ಳಿ ರವಿಶಂಕರ್ ನಗರಕೆರೆ ಕೃಷ್ಣ, ಶಿವಾನಂದ, ಅಜ್ಜಳ್ಳಿ ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net