

ಸಂಡೂರು: ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಕಾರ್ಯವೈಖರಿ ಖಂಡಿಸಿ ಡಿವೈಎಫ್‌ಐ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ತೋರಣಗಲ್ ಸಿಎಚ್‌ಸಿಯಲ್ಲಿ ಬೆಳಗ್ಗೆ 8.30ರಿಂದ 11.30ರವರೆಗೆ ಡಾ.ರಜಿಯಾ ಬೇಗಂ ಇರುವುದಿಲ್ಲ. ಚಿಕಿತ್ಸೆಗೆ ಬರುವ ರೋಗಿಗಳಿಗೆ ದಿನದ 24 ಗಂಟೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾಕ್ಟರ್‌ಗಳು ಸಿಗುತ್ತಿಲ್ಲ. ಆದ್ದರಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಗಾಯಾಳುಗಳು ಆಸ್ಪತ್ರೆಗೆ ಬಂದರೆ ಬ್ಯಾಂಡೇಜ್ ಇಲ್ಲವೆಂದು ನಾಳೆ, ನಾಡಿದ್ದು ಬರಲು ತಿಳಿಸಲಾಗುತ್ತಿದೆ.
ವೈದ್ಯರು ಸ್ಟೆತಸ್ಕೋಪ್ ಉಪಯೋಗಿಸಿ ನಾಡಿ ಮಿಡಿತವನ್ನು ಚೆಕ್ ಮಾಡಿ ರೋಗಿಯ ಸಮಸ್ಯೆಗೆ ತಕ್ಕಂತೆ ಚಿಕಿತ್ಸೆ ನೀಡಬೇಕು. ಸಿಬ್ಬಂದಿ ಮಾಬು ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ನಾಗಭೂಷಣ, ಸಿಪಿಐಎಂ ಪಕ್ಷದ ಕಾರ್ಯದರ್ಶಿ ಎ.ಸ್ವಾಮಿ, ಡಿವೈಎಫ್‌ಐ ತೋರಣಗಲ್ ಗ್ರಾಮ ಘಟಕ ಕಾರ್ಯದರ್ಶಿ ಲೋಕೇಶ, ಉಪಾಧ್ಯಕ್ಷ ಅಕ್ಷಯ, ಅಂಬೇಡ್ಕರ್ ಸಂಘದ ನಾಗರಾಜ ಕುರೇಕುಪ್ಪ, ರಾಮು, ಎಚ್.ಪಂಪಯ್ಯ, ಅಂಜಿನಪ್ಪ, ವೇಬಾಕುಮಾರಿ, ಅಂಜಿನಮ್ಮ ಇತರರಿದ್ದರು.