More

    ವಸಡಿನ ಆರೋಗ್ಯ ಕಾಪಾಡಿಕೊಳ್ಳಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಸಲಹೆ

    ಮಂಡ್ಯ: ಹಲ್ಲುಗಳು ಆರೋಗ್ಯವಾಗಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ವಸಡಿನ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಸಲಹೆ ನೀಡಿದರು.
    ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ದಂತ ವೈದ್ಯಕೀಯ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಬಾಯಿ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜೈಲಿನಲ್ಲಿರುವವರಿಗೆ ಬಾಯಿ ಮತ್ತು ಹಲ್ಲುಗಳ ಆರೋಗ್ಯದ ಬಗ್ಗೆ ಮಾಹಿತಿ ಇರುವುದಿಲ್ಲ. ಈ ಕಾರಣಕ್ಕೆ ಕೈದಿಗಳಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಬಾಯಿ ಮತ್ತು ಹಲ್ಲುಗಳನ್ನು ಚೆನ್ನಾಗಿ ನೋಡಿಕೊಂಡು ಶುಚಿಯಾಗಿಟ್ಟುಕೊಳ್ಳುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
    ದಂತ ಭಾಗ್ಯ ಎಲ್ಲ ಆರೋಗ್ಯಕ್ಕೂ ಇದೇ ಕಾರಣ. ಬಾಯಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಕೆಲವರು ಬ್ರೆಷ್ ಮಾಡುತ್ತಾರೆ. ಸರಿಯಾದ ರೀತಿಯಲ್ಲಿ ಮಾಡದಿದ್ದರೆ ವಸಡುಗಳಲ್ಲಿ ಗಾಯವಾಗಿ, ಕೀವು ಕಟ್ಟಿಕೊಳ್ಳುತ್ತದೆ. ಇನ್ನು ಕೆಲವರಿಗೆ ಹಲ್ಲುಗಳಲ್ಲಿ ಹುಳುಕು ಇರುತ್ತದೆ. ಅದನ್ನು ತೆಗೆದು ರಂಧ್ರವನ್ನು ಮುಚ್ಚಬೇಕು. ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
    ದಂತ ವಿಭಾಗದ ನೋಡಲ್ ಅಧಿಕಾರಿ ಡಾ.ಎಚ್.ಆರ್.ಅರುಣಾನಂದ ಮಾತನಾಡಿ, ಪ್ರಸ್ತುತದಲ್ಲಿ ಇರುವಂತೆ ಈ ಹಿಂದೆ ಡಯಗ್ನೋಸ್ಟಿಕ್ ಉಪಕರಣ ಇರಲಿಲ್ಲ. ಆರೋಗ್ಯದಲ್ಲಿ ಏರುಪೇರಾಗಿದ್ದರೆ ಬಾಯಿ ಮತ್ತು ನಾಲಗೆಯನ್ನು ನೋಡಿ ರೋಗವನ್ನು ಗುರುತಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಂದು ಇವೆಲ್ಲವೂ ಬದಲಾಗಿದೆಯಾದರೂ ಕೂಡ ಯಂತ್ರೋಪಕರಣಗಳ ಸಹಾಯದಿಂದ ರೋಗವನ್ನು ಕಂಡು ಹಿಡಿಯಲಾಗುತ್ತಿದೆ ಎಂದು ತಿಳಿಸಿದರು.
    ಮಕ್ಕಳಿಗೆ 6 ತಿಂಗಳಲ್ಲಿ ಹಲ್ಲುಗಳು ಹುಟ್ಟುತ್ತವೆ. ಎರಡೂವರೆ ವರ್ಷದೊಳಗೆ ಸಂಪೂರ್ಣ ಹಲ್ಲುಗಳು ಬೆಳೆಯುತ್ತವೆ. ಆರು ವರ್ಷದಿಂದ 12 ವರ್ಷದೊಳಗೆ ಹಲ್ಲುಗಳು ಬಿದ್ದು ಮತ್ತೆ ಹುಟ್ಟುತ್ತವೆ. ಇದು ದೇವರು ನಮಗೆ ಕೊಟ್ಟ ವರ. 45 ವರ್ಷ ದಾಟಿದವರಿಗೆ 3ನೇ ಸೆಟ್ ಕೊಡಲಾಗುತ್ತದೆ. ಜಿಲ್ಲೆಯಲ್ಲಿರುವ 10 ಸಮುದಾಯ ಆರೋಗ್ಯ ಕೇಂದ್ರ, ಆರು ತಾಲ್ಲೂಕು ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ದಂತ ಭಾಗ್ಯ ಕಾರ್ಯಕ್ರಮ ನಡೆಯುತ್ತದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್, ಶಿವಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಇಂದ್ರಾಣಿ, ಕೀಲಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಡಾ.ಸುಕನ್ಯಾ, ಡಾ.ಬಿ.ಎಸ್.ಶಿವಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಗಳಾ, ಡಾ.ನಿಸರ್ಗ ಅರುಣಾನಂದ, ಜೈಲರ್ ರವಿಕುಮಾರ್ ಭಜಂತ್ರಿ, ಸಹಾಯಕ ಜೈಲರ್‌ಗಳಾದ ಎಸ್.ಎಸ್.ನಾಗರಾಜು, ಎಚ್.ಡಿ.ತಳವಾರ್, ಶಿಕ್ಷಕ ಶಿವಲಿಂಗಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts