

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಒಯು) ವತಿಯಿಂದ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇವರೊಂದಿಗೆ, ಆರ್ವಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ ಮತ್ತು ಬೆಂಗಳೂರಿನ ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸೇವಾ ಸಂಸ್ಥೆಯ ಉಪಾಧ್ಯಕ್ಷ ಈ.ಎಸ್.ಚಕ್ರವರ್ತಿ ಅವರಿಗೂ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು.
ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕೆಎಸ್ಒಯು 17ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಈ ಕ್ಷಣಕ್ಕೆ ಸಾಕ್ಷಿಯಾಯಿತು. ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಎ.ಬಿ.ಬಸವರಾಜು ಘಟಿಕೋತ್ಸವ ಭಾಷಣ ಮಾಡಿದರು. ಮುಕ್ತ ವಿವಿ ಕುಲಪತಿ ಡಾ.ಎಸ್.ವಿದ್ಯಾಶಂಕರ್, ಕುಲಸಚಿವ ಡಾ.ಆರ್.ರಾಜಣ್ಣ ಇನ್ನಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ 31 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್ಡಿ ಪದವಿ, 48 ಜನರಿಗೆ ಚಿನ್ನದ ಪದಕ, 38 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. 2018-19 ಮತ್ತು 2019-20ನೇ ಶೈಕ್ಷಣಿಕ ಸಾಲಿನ 8,338 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು.
81, 75ರ ಹರಯದಲ್ಲಿ ಪದವಿಯ ಗರಿಮೆ: ರಾಜ್ಯ ಮುಕ್ತ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ ಸಮಾರಂಭ ವೃದ್ಧರ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಯಿತು. 81 ವರ್ಷದ ಶ್ರೀನಿವಾಸಮೂರ್ತಿ, 75 ವರ್ಷದ ಎನ್.ಶ್ರೀಧರ್ ಸ್ನಾತಕೋತ್ತರ ಪದವಿ ಪಡೆದು ಇಳಿವಯಸ್ಸಿನಲ್ಲಿ ಸಾಧಕರಾಗಿ ಇತರರಿಗೆ ಮಾದರಿಯಾದರು. ಶ್ರೀನಿವಾಸಮೂರ್ತಿ ಮಾತೃಭಾಷೆ ಕನ್ನಡದಲ್ಲಿ, ಎನ್.ಶ್ರೀಧರ್ ಪ್ರಾಚೀನ ಭಾಷೆ ಸಂಸ್ಕೃತ ವಿಷಯದಲ್ಲಿ ಎಂ.ಎ. ಪದವಿ ಮುಡಿಗೇರಿಸಿ ಕೊಂಡರು.