ಆತ್ಮಹತ್ಯೆಗೆಂದು ಬಂದವನಿಗೆ ಆಪದ್ಬಾಂಧವನಾದ ವೈದ್ಯ

IMG-20240616-WA0027
Published on

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ಕೆಲಸ ಮಾಡುವ ವೇಳೆ ಕೈಗೆ ಆದ ಗಾಯಕ್ಕೆ ಸೂಕ್ತ ಚಿಕಿತ್ಸೆ ದೊರಕದೆ ಕೈ ಕೊಳೆಯುವಂತಾಗಿದ್ದರಿಂದ ಮನನೊಂದು ಬೆಂಗಳೂರಿನಿಂದ ಮಾಗಡಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದವನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಆಪದ್ಬಾಂಧವನಾಗಿದ್ದು, ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ.

ಬೆಂಗಳೂರಿನ ಅಂದ್ರಹಳ್ಳಿ ನಿವಾಸಿ ಹೊಬೇಶ್ (40) ಎಂಬಾತ ಬಲಗೈ ಗಂಬೀರ ಗಾಯವಾಗಿ ನರಳಾಡುತ್ತಿರುವುದನ್ನು ಕಂಡ ವೈದ್ಯ ಡಾ. ಯಶವಂತ್ ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿಕೊಂಡು ತುರ್ತಾಗಿ ಚಿಕಿತ್ಸೆ ನೀಡಿ ಆರೈಕೆಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೊಬೇಶ್‌ಗೆ ಕುಟುಂಬಸ್ಥರು ಇಲ್ಲ. ಈತ ಕೂಲಿ ಕೆಲಸ ಮಾಡುವ ವೇಳೆ ಕೈಗೆ ತೀವ್ರ ಪೆಟ್ಟಾಗಿದ್ದು, ಸಮರ್ಪಕವಾದ ಚಿಕಿತ್ಸೆ ಪಡೆಯದ ಕಾರಣ ಕಾಲಕ್ರಮೇಣ ಕೈ ಕೊಳೆಯುವ ಸ್ಥಿತಿಗೆ ತಲುಪಿದೆ. ಈ ವೇಳೆ ಹೊಬೇಶ್ ಹಲವು ಆಸ್ಪತ್ರೆಗೆ ತೆರಳಿದರೂ ಆತನ ಸ್ಥಿತಿ ಕಂಡ ಅನೇಕ ಆಸ್ಪತ್ರೆಗಳು ಚಿಕಿತ್ಸೆ ನೀಡದೆ ನಿರ್ಲಕ್ಷ್ಯಿಸಿದ್ದವು.

ಇದರಿಂದ ಮನನೊಂದ ಹೋಬೇಶ್, ನರಳಾಡಿ ಸಾಯುವ ಬದಲು ಆತ್ಮಹತ್ಯೆ ದಾರಿ ಹಿಡಿಯಲು ಬೆಂಗಳೂರಿನಿಂದ ಮಾಗಡಿಗೆ ತಲುಪಿದ್ದ. ಈ ವೇಳೆ ರಸ್ತೆ ಬಳಿ ಆತನನ್ನು ಡಾ.ಯಶವಂತ್ ಕರೆತಂದು ಚಿಕಿತ್ಸೆ ನೀಡಿದ್ದಾರೆ. ಇದರಿಂದ ಹೋಬೇಶ್ ಚೇತರಿಸಿಕೊಳ್ಳುತ್ತಿದ್ದಾರೆ.

ಪಟ್ಟಣದ ಕೊಟಪ್ಪನ ಪಾಳ್ಯದ ನಿವಾಸಿಯೊಬ್ಬರು ಹೃದಯಾಘಾತದಿಂದ ಮೃತಪಡುವ ಸ್ಥಿತಿಯಲ್ಲಿದ್ದಾಗ ಚಿಕಿತ್ಸೆ ನೀಡಿ ಬದುಕಿಸಿ ಅವರ ಕುಟುಂಬಕ್ಕೆ ಆಸರೆಯಾಗಿದ್ದ ವೈದ್ಯರು, ಈಗ ಅನಾಥ ವ್ಯಕ್ತಿಗೆ ಚಿಕಿತ್ಸೆ ನೀಡಿಡುವ ಮೂಲಕ ವೈದ್ಯ ವೃತ್ತಿಯ ಘನತೆ ಹೆಚ್ಚಿಸಿದ್ದಾರೆ ಎಂದು ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ನರಳಾಡುವವರಿಗೆ ಚಿಕಿತ್ಸೆ ನೀಡುವುದು ವೈದ್ಯರಾದ ನಮ್ಮ ಕರ್ತವ್ಯ. ಅದರಂತೆ ಆ ವ್ಯಕ್ತಿಯ ಕೈ ನೋಡಿ ಚಿಕಿತ್ಸೆ ನೀಡಿದ್ದೇನೆ. ಈಗ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ. ನಾಗರಿಕರು ಸದುಪಯೋಗಪಡಿಸಿಕೊಳ್ಳಿ. ವೈದ್ಯ ಡಾ.ಯಶವಂತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net