ಸೂಕ್ತ ಮಾಹಿತಿ ಇಲ್ಲದೆ ಮಾತನಾಡಬಾರದು ಶಾಸಕರಿಗೆ ಕಿವಿ ಹಿಂಡಿದ ಡಾಕ್ಟರ್

f6476162-4638-4f36-b05d-fad99f91ee82
Published on

ರಾಮನಗರ: ಚುನಾವಣೆ ಬಂದರೆ ಕುಮಾರಸ್ವಾಮಿ ಆಸ್ಪತ್ರೆಗೆ ಸೇರುತ್ತಾರೆ ಎಂದು ಟೀಕಿಸಿದ್ದ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್, ನಯವಾಗಿಯೇ ತಿರುಗೇಟು ನೀಡಿದ್ದು, ಸರಿಯಾದ ಮಾಹಿತಿ ಇಲ್ಲದೆ ಮಾತನಾಡಬಾರದು ಎಂದಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಮಾಡುವಾಗ ನಾನೂ ಇದ್ದೆ. ಆಧುನಿಕ ತಂತ್ರಜ್ಞಾನ ಬಳಸಿ ಕಾಲಿನ ರಕ್ತನಾಳದ ಮೂಲಕ ಹೃದಯದ ಕವಾಟ ಬದಲಾವಣೆ ಮಾಡಲಾಗಿದೆ.

ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಬೇಕಾದರೆ ಎಂ.ಬಿ.ಬಿ.ಎಸ್ 6 ವರ್ಷ, ಎಂ.ಡಿ 3 ವರ್ಷ, ಸೂಪರ್ ಸ್ಪೇಷಾಲಿಟಿಗೆ ಡಿ.ಎಂ ಕಾರ್ಡಿಯಾಲಜಿ ಕೋರ್ಸ್ ಸೇರಿದಂತೆ ಒಟ್ಟು 13 ವರ್ಷ ಓದಬೇಕು. ಇದು ಆಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆ. ಸಾಮಾನ್ಯ ವೈದ್ಯರಿಗೂ ಇದರ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ. ಇನ್ನು ಸಾಮಾನ್ಯ ಜನರಿಗೆ ಹೇಗೆ ಗೊತ್ತಾಗಬೇಕು. ಜ್ಞಾನಿಗಳು ಜ್ಞಾನಿಗಳಾಗಿಯೇ ಇರಬೇಕು. ಮತ್ತೊಂದು ಆಗಬಾರದು ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಅವರಿಗೆ 2007ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಕವಾಟ ಜೋಡಿಸಲಾಗಿದೆ. 2017ರಲ್ಲಿ ಎರಡನೇ ಸಲ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಮೂರನೇ ಸಲ ಆಧುನಿಕ ತಂತ್ರಜ್ಞಾನದ ಬಳಸಿ ಕಾಲಿನ ರಕ್ತನಾಳದ ಮೂಲಕ ಕವಾಟ ಬದಲಾಯಿಸಲಾಗಿದೆ. ಆಂಜಿಯೋಗ್ರಾಂ ತಂತ್ರಜ್ಞಾನ ಬಳಸಿ ಮಾಡುವ ಈ ಶಸ್ತ್ರಚಿಕಿತ್ಸೆಯನ್ನು ಟಾವಿ ಎನ್ನಲಾಗುತ್ತದೆ. ನಾನು ಸಹ ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇನೆ ಎಂದರು.

ಬೆಂಗಳೂರಿನಲ್ಲೇ ಎಚ್‌ಡಿಕೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬಹುದಾಗಿತ್ತು. ಆದರೆ, ಚುನಾವಣೆ ಸಂದರ್ಭವಾಗಿರುವುದರಿಂದ ಇಲ್ಲಿ ಅವರಿಗೆ ಒತ್ತಡ ಹೆಚ್ಚಾಗುತ್ತದೆಂಬ ಕಾರಣಕ್ಕೆ ಚೆನ್ನೈನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net