"ಅವಳನ್ನು ಕೊಂದಿದ್ದೇ..." ಪತ್ನಿ ಉಸಿರು ನಿಲ್ಲಿಸಿದ ವೈದ್ಯನ ಕೇಸ್​ಗೆ ಮತ್ತೊಂದು ಟ್ವಿಸ್ಟ್​! ಹೊರಬಿತ್ತು ಆತ ಕಳುಹಿಸಿದ ಮೆಸೇಜ್​ | Murder Case

"ಅವಳನ್ನು ಕೊಂದಿದ್ದೇ..." ಪತ್ನಿ ಉಸಿರು ನಿಲ್ಲಿಸಿದ ವೈದ್ಯನ ಕೇಸ್​ಗೆ ಮತ್ತೊಂದು ಟ್ವಿಸ್ಟ್​! ಹೊರಬಿತ್ತು ಆತ ಕಳುಹಿಸಿದ ಮೆಸೇಜ್​ | Murder Case
Published on

ಬೆಂಗಳೂರು: ಆರು ತಿಂಗಳ ಹಿಂದೆ ವೃತ್ತಿಯಲ್ಲಿ ವೈದ್ಯೆಯಾಗಿದ್ದ (Doctor Murder Case) ಪತ್ನಿಯನ್ನು ಪಾಪಿ ಪತಿ ಕೊಲೆಗೈದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ಡಾ. ಮಹೇಂದ್ರ ರೆಡ್ಡಿ ಜಿ.ಎಸ್​ ಇದೀಗ ಪೊಲೀಸ್​ ಕಸ್ಟಡಿಯಲ್ಲಿದ್ದಾನೆ. ಕೇಸ್​ ಬೆನ್ನತ್ತಿದ ಬೆಂಗಳೂರು ಪೊಲೀಸರು, ಈತನೇ ಆರೋಪಿ ಎಂಬುದನ್ನು ಖಚಿತಪಡಿಸಿಕೊಂಡ ಬೆನ್ನಲ್ಲೇ ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಇದೀಗ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದ್ದು, ಆರೋಪಿ ಪತ್ನಿಯನ್ನು ಕೊಲೆಗೈದ ಬಳಿಕ ಯುವತಿಯೊಬ್ಬಳಿಗೆ ಸಂದೇಶ ಕಳುಹಿಸಿರುವುದು ಸ್ಪಷ್ಟವಾಗಿದೆ.

ಮೃತ ವೈದ್ಯೆಯನ್ನು ಡಾ. ಕೃತಿಕಾ ಎಂ. ರೆಡ್ಡಿ (29) ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಚರ್ಮರೋಗ ತಜೆಯಾಗಿದ್ದರು ಎಂದು ವರದಿಯಾಗಿದೆ. ಪೊಲೀಸ್​ ಅಧಿಕಾರಿಗಳ ಮಾಹಿತಿ ಪ್ರಕಾರ, ಆರೋಪಿ ಮಹೇಂದ್ರ ತನ್ನ ಹೆಂಡತಿಯ ಉಸಿರು ನಿಲ್ಲಿಸಿದ ಬಳಿಕ ಓರ್ವ ಯುವತಿಗೆ ಆನ್​ಲೈನ್​ ಪೇಮೆಂಟ್​ ಖಾತೆಯಿಂದ ಸಂದೇಶ ಕಳುಹಿಸಿದ್ದಾನೆ. ಅದರಲ್ಲಿ, ನಿನಗಾಗಿ ನಾನು ನನ್ನ ಪತ್ನಿಯನ್ನು ಕೊಂದೆ ಎಂದು ಆತ ಹೇಳಿರುವುದು ಸ್ಪಷ್ಟವಾಗಿದೆ.

ಮಹೇಂದ್ರ ಬಳಸುತ್ತಿದ್ದ ಮೊಬೈಲ್​ ಫೋನ್​ ಅನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅದನ್ನು ವಿಧಿವಿಜ್ಞಾನ ವಿಶ್ಲೇಷಣಾ ತಂಡಕ್ಕೆ ಮಾಹಿತಿ ಕಲೆಹಾಕುವಂತೆ ರವಾನಿಸಿತ್ತು. ಅಂತೆಯೇ ಅದರಲ್ಲಿ ಆರೋಪಿ ಯುವತಿಗೆ ಸಂದೇಶ ಕಳಿಸುವುದು ಗೊತ್ತಾಗಿದೆ. ಈ ಮಾಹಿತಿಯ ಮೇರೆಗೆ ಮಹೇಂದ್ರ ಮೆಸೇಜ್​ ಮಾಡಿದ್ದ ಯುವತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆದರೆ, ಮಹಿಳೆಯ ಗುರುತನ್ನು ಮಾತ್ರ ಬಹಿರಂಗಪಡಿಸಿಲ್ಲ.

ಓವರ್​ ಡೋಸ್​ ಅರಿವಳಿಕೆ

ಆರೋಪಿ ಮಹೇಂದ್ರ, ‘ಪ್ರೊಪೋಫೋಲ್’ ಎಂಬ ಅರಿವಳಿಕೆ​ಯನ್ನು ಆಕೆಯ ಉಸಿರು ನಿಲ್ಲಿಸಲು ಬಳಿಸಿದ್ದಾರೆಂದು ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ. ಇದು ಉಸಿರಾಟದ ವೈಫಲ್ಯ ಮತ್ತು ಸಾವಿಗೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (FSL) ವರದಿಗಳು ಸ್ಪಷ್ಟಪಡಿಸಿವೆ.

ಮಹೇಂದ್ರ ಮುಖವಾಡ ಕಳಚಿದ್ದೇ ಮೃತಳ ಸಹೋದರಿ

ಕೃತಿಕಾಳ ಸಹೋದರಿ ರೇಡಿಯಾಲಜಿಸ್ಟ್ ಡಾ. ನಿಕಿತಾ ಎಂ. ರೆಡ್ಡಿ, ಆರೋಪಿಯ ಮಾತುಗಳ ಮೇಲೆ ಮೊದಲಿನಿಂದಲೂ ಶಂಕಿಸಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದಾದ ನಿಕಿತಾ, ಮಾರತಹಳ್ಳಿ ಪೊಲೀಸರಲ್ಲಿ ಮೆಡಿಕೊ ಲೀಗಲ್ ಕೇಸ್ (MLC) ದಾಖಲಿಸಿದರು. ಸಹೋದರಿಯ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ಭೇದಿಸುವಂತೆ ದೂರು ನೀಡಿದ್ದರು. ಇದರೊಟ್ಟಿಗೆ ಕೃತಿಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಹಾಗೂ ಎಫ್​ಎಸ್​ಎಲ್ ವರದಿಗೆ ಸ್ಯಾಂಪಲ್​ ಕಳುಹಿಸಿಕೊಡಿ ಎಂದು ಕೋರಿದ್ದರು. ಅಂತೆಯೇ, ಕೇಸ್​ ಬೆನ್ನತ್ತಿದ ಖಾಕಿಗೆ ಕೃತಿಕಾಳ ಸಾವು ಸಹಜವಲ್ಲ! ಅದು ಕೊಲೆ ಎಂಬುದು ಸ್ಪಷ್ಟವಾಯಿತು.

ಏನಿದು ಪ್ರಕರಣ?

ಈ ವರ್ಷದ ಏಪ್ರಿಲ್​ 24ರಂದು ಚರ್ಮರೋಗ ತಜ್ಞೆ ಡಾ. ಕೃತಿಕಾ ಮೃತಟ್ಟಿದ್ದಾಗಿ ವರದಿಯಾಗಿತ್ತು. ಬೆಂಗಳೂರಿನ ಮಾರತಹಳ್ಳಿಯ ಮುನ್ನೇಕೊಳಲದಲ್ಲಿರುವ ತಮ್ಮ ಮನೆಯಲ್ಲಿ ವೈದ್ಯೆ ಶವ ಪತ್ತೆಯಾಯಿತು. ಈ ವೇಳೆ ಹೆಂಡತಿಗೆ ಜೀರ್ಣಕಾರಿ ಮತ್ತು ಲೋ ಬಿಪಿ ಸಮಸ್ಯೆಗಳಿತ್ತು. ತೀರ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆ, ಚಿಕಿತ್ಸೆ ಫಲಿಸದೆ ಸಾವಿಗೀಡಾದಳು ಎಂದು ಆರೋಪಿ ಮಹೇಂದ್ರ ಆರಂಭದಲ್ಲಿ ಪತ್ನಿಯ ಕುಟುಂಬಸ್ಥರಿಗೆ ಮನವರಿಕೆ ಮಾಡಿದ್ದ. ಆದರೆ, ಮೃತ ಯುವತಿಯ ಸಹೋದರಿಯ ಶಂಕೆ ಆರು ತಿಂಗಳ ಬಳಿಕ ಪ್ರಕರಣದ ಅಸಲಿಯತ್ತನ್ನು ಹೊರಬಿಚ್ಚಿಟ್ಟಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net