ಖರೀದಿದಾರರ ಪರವಾಗಿ ಕೆಲಸ ಮಾಡ್ತೀರಾ?

06-03-rama-lokayuktha1
Published on

* ಉಪ ನೋಂದಣಾಧಿಕಾರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ತರಾಟೆ

ರಾಮನಗರ

ಸೇಲ್ ಡೀಡ್‌ನಲ್ಲಿ ಖರೀದಿದಾರರ ಪಾನ್ ನಂಬರ್ ಏಕಿಲ್ಲ? ಕಳೆದ ಒಂದು ವರ್ಷದಿಂದಲೂ ಜೆ ಸ್ಲಿಪ್ ಮಾಹಿತಿ ಇರುವ ಪುಸ್ತಕಕ್ಕೆ ಸಹಿ ಏಕೆ ಮಾಡಿಲ್ಲ? ನೀವೆಲ್ಲ ಸರ್ಕಾರದ ಕೆಲಸ ಮಾಡುತ್ತಿದ್ದೋರೋ? ಇಲ್ಲ ಖರೀದಿದಾರರ ಪರವಾಗಿ ಕೆಲಸ ಮಾಡುತ್ತಿದ್ದೀರೋ..?

ಇದು ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ರಾಮನಗರ ಉಪ ನೋಂದಣಾಧಿಕಾರಿ ಕಚೇರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅವ್ಯವಸ್ಥೆ ಮತ್ತು ಅವ್ಯವಹಾರದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ವಿವಿಧ ಕಡೆಗಳಲ್ಲಿ ಹಾಗೂ ರಾಮನಗರ ಉಪ ನೋಂದಣಾಧಿಕಾರಿ ಕಚೇರಿಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ಯಾನ್ ನಂಬರ್ ಏಕಿಲ್ಲ? :

ನೋಂದಣಿಯಾಗಿದ್ದ ದಾಖಲೆಯನ್ನು ಪರೀಶಿಲನೆ ಮಾಡಿದ ಉಪ ಲೋಕಾಯುಕ್ತರು, ಅದರಲ್ಲಿ ಒಂದು ಕೋಟಿ ರೂ. ಗೂ. ಹೆಚ್ಚು ಮೊತ್ತದ ವಹಿವಾಟು ನಡೆದಿದ್ದರೂ ಖರೀದಿದಾರರು ಮತ್ತು ಮಾರಾಟಗಾರರ ಪ್ಯಾನ್ ನಂಬರ್ ನಮೂದಿಸದೆ ಇರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಬಾರದ ಹಿನ್ನೆಲೆಯಲ್ಲಿ ನೀವೆಲ್ಲರೂ ಖರೀದಿದಾರರ ಪರವಾಗಿ ಕೆಲಸ ಮಾಡುತ್ತಿದ್ದೀರಾ? 6 ಲಕ್ಷ ರೂ. ಇದ್ದವರ ಪ್ಯಾನ್ ನಂಬರ್ ಹಾಕಿದ್ದೀರಿ, ಆದರೆ, ಕೋಟಿ ರೂ. ಇದ್ದವರ ಪ್ಯಾನ್ ನಂಬರ್ ಏಕೆ ಹಾಕಲಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತದೆ. ಖರೀದಿದಾರರು ಯಾರಿದ್ದಾರೆ ಕರೆಯಿಸಿ ಎಂದು ತಾಕೀತು ಮಾಡಿದರು.

ಇಷ್ಟೇ ಅಲ್ಲದೆ, ಜೆ ಸ್ಲಿಪ್ ನಿರ್ವಹಣೆ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ಸುಮಾರು ಒಂದು ವರ್ಷದಿಂದಲೂ ಜೆ ಸ್ಲಿಪ್ ನಿರ್ವಹಣೆ ಮಾಡಿರುವ ಕಡತದಲ್ಲಿ ಯಾವುದೇ ಅಧಿಕಾರಿಯ ಸಹಿಯೂ ಇಲ್ಲದಿರುವುದನ್ನು ಪತ್ತೆ ಹಚ್ಚಿದರು. ನೋಂದಣಿ ವೇಳೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸುವಂತಿಲ್ಲ ಎಂದು ತಾಕೀತು ಮಾಡಿದರು.

ಫೋಟೋ ತೆರವು

ಪ್ರಸ್ತುತ ಮಾಹಿತಿ ಆಯೋಗದ ಆಯುಕ್ತರೂ ಆಗಿರುವ ಹಿಂದೆ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರೂ ಆಗಿದ್ದ ಡಾ.ಬಿ.ಆರ್ ಮಮತಾ ಮತ್ತು ಇತರ ಸ್ಥಳೀಯ ಅಧಿಕಾರಿಗಳು ಇದ್ದ ಫೋಟೋ ಒಂದನ್ನು ಕಚೇರಿ ಗೋಡೆಯಿಂದ ತೆಗೆಸಿದ ಘಟನೆಯೂ ನಡೆಯಿತು. ಫೋಟೋ ನೋಡುತ್ತಿದ್ದಂತೆ ಕೆರಳಿದ ಉಪ ಲೋಕಾಯುಕ್ತರು, ಇವರೇನು ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ?, ಗಾಂಧಿ ಅವರೋ, ರಾಷ್ಟ್ರಪತಿ, ಪ್ರಧಾನಿಯೋ ಅವರ ಫೋಟೋ ಏಕೆ ಕಚೇರಿಯಲ್ಲಿ ಹಾಕಿದ್ದೀರಿ?,ಫೋಟೋವನ್ನು ಅವರ ಮನೆಗೆ ಕಳುಹಿಸಿಕೊಡಿ. ಕಚೇರಿಯಲ್ಲಿ ಲೋಕಾಯುಕ್ತದ ಮಾಹಿತಿ ಇರುವ ಫಲಕ ಹಾಕಲು ಆಗುವುದಿಲ್ಲ, ಫೋಟೋ ಹಾಕುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಬೆದರಿದ ಸಿಬ್ಬಂದಿ ತಕ್ಷಣವೇಫೋಟೋ ತೆಗೆದು ಹಾಕಿದರು.

ಹಾಜರಾತಿ ಇಲ್ಲದ ನೌಕರರು

ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರ ಬಗ್ಗೆಯೂ ಮಾಹಿತಿ ಕಲೆ ಹಾಕಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು, ಹಾಜರಾತಿ ಸಂಬಳದ ಬಗ್ಗೆಯೂ ಮಾಹಿತಿ ಪಡೆದರು. 11 ಸಾವಿರ ರೂ. ಸಂಬಳ ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ಪಡೆದು, ಇಷ್ಟು ಸಂಬಳ ಸಾಲುತ್ತಾ ಎಂದು ಪ್ರಶ್ನಿಸಿದರು. ನಿಮ್ಮ ಹಾಜರಾತಿ ಹೇಗೆ ಎಂದಾಗ ಹೊರ ಗುತ್ತಿಗೆ ಸಿಬ್ಬಂದಿ ಮಾಹಿತಿ ನೀಡಲು ತಡಬಡಾಯಿಸಿದರು. ಈ ವೇಳೆ ಕಚೇರಿ ಸಿಬ್ಬಂದಿ ಅವರು ನೋಂದಣಿಗಾಗಿ ಹೆಬ್ಬೆಟ್ಟು ನೀಡಿದಾಗ ಅವರ ಹಾಜರಾತಿ ದಾಖಲಾಗುತ್ತದೆ ಎನ್ನುವ ಮಾಹಿತಿಯಿಂದ ತೃಪ್ತರಾಗದೆ ತಮ್ಮದೆ ಸಿಬ್ಬಂದಿ ಕಳುಹಿಸಿ ಪರಿಶೀಲಿಸಿದರು.

ಐಡಿ ಕಾರ್ಡ್ ಎಲ್ಲಿ

ಕಚೇರಿಯ ಹಿರಿಯ ಉಪ ನೋಂದಣಾಧಿಕಾರಿ ಮತ್ತು ಮತ್ತೊಬ್ಬ ಸಿಬ್ಬಂದಿ ಐಡಿ ಕಾರ್ಡ್ ‘ರಿಸದಿರುವುದಕ್ಕೆ ಉಪ ಲೋಕಾಯುಕ್ತರು ತರಾಟೆಕೊಂಡರು. ನೀವೇ ಸಿಬ್ಬಂದಿ ಎಂದು ಗೊತ್ತಾಗುವುದು ಹೇಗೆ. ನೀವೇಕೇ ಐಡಿ ಕಾರ್ಡ್ ಹಾಕಿಲ್ಲ ಎಂದರು. ಈ ವೇಳೆ ಹಿರಿಯ ಉಪ ನೋಂದಣಾಧಿಕಾರಿ ನಾನು ಕೆಲವು ದಿನಗಳ ಹಿಂದಷ್ಟೇ ಬಂದಿದ್ದು, ಇನ್ನೂ ಐಡಿ ಕಾರ್ಡ್ ಬಂದಿಲ್ಲ ಎನ್ನುವ ಉತ್ತರ ನೀಡಿದರು. ಅಲ್ಲದೆ, ಮತ್ತೊಂದು ಕಡೆಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿದೆ ಎನ್ನುವ ಮಾಹಿತಿಯನ್ನು ಹೊರ ಹಾಕಿದಾಗ, ಯಾಕೆ ಇಲ್ಲಿ ನಿಮಗೆ ಸರಿ ಹೊಂದುತ್ತಿಲ್ಲವೇ, ಅಲ್ಲಿಯೇ ಚೆನ್ನಾಗಿ ಇತ್ತೇ ಎಂದು ಖಾರವಾಗಿಯೇ ಪ್ರಶ್ನಿಸಿದರು.  ಈ ವೇಳೆ ರಾಮನಗರ ಲೋಕಾಯುಕ್ತ ಎಸ್‌ಪಿ ಸ್ನೇಹ, ಲೋಕಾಯುಕ್ತ ಬೆಂಗಳೂರು ಕಚೇರಿಯ ಉಪನಿಬಂ‘ಕ ಬಸವರಾಜಪ್ಪ, ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್ ಮತ್ತು ಸಿಬ್ಬಂದಿ ಇದ್ದರು.

ಧೈರ್ಯವಾಗಿ ಮುಂದೆ ಬನ್ನಿ

ಸಾರ್ವಜನಿಕರು ದೂರು ನೀಡುತ್ತಾರೆ, ಆದರೆ ನಾವು ಕಚೇರಿಗೆ ಬಂದು ಪರಿಶೀಲನೆ ಮಾಡುವ ವೇಳೆ ಯಾರೂ ಮುಂದೆ  ಬಂದು ಏನೂ ಹೇಳುವುದಿಲ್ಲ. ಉಪ ನೋಂದಣಾಧಿಕಾರಿ ಕಚೇರಿಗೆ ದಾಳಿ ಮಾಡಿದರೆ ಅಲ್ಲಿದ್ದ ಜನ ತಕ್ಷಣವೇ ಮಾಯವಾಗುತ್ತಾರೆ. ಯಾರನ್ನಾದರೂ ಕೇಳಿದರೂ ಯಾವುದೇ ಮಾಹಿತಿ ನೀಡುವುದಿಲ್ಲ. ಇಂತಹ ಮನಸ್ಥಿತಿಯಿಂದ ಸಾರ್ವಜನಿಕರು ಹೊರ ಬರಬೇಕು. ಇಲ್ಲವಾದರೆ ಲೋಕಾಯುಕ್ತ, ಮಾ‘್ಯಮಗಳಿಂದಲೂ ಯಾವುದೇ ವ್ಯವಸ್ಥೆ ಸರಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮಾಧ್ಯಮಗಳೊಂದಿಗೆ ಉಪ ಲೋಕಾಯುಕ್ತರು ಮಾತನಾಡಿದರು.

---

ರಾಮನಗರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಕಷ್ಟು ಲೋಪದೋಷಗಳ ಪಟ್ಟಿ ಮಾಡಿಕೊಳ್ಳಲಾಗಿದೆ. ಇವುಗಳ ಪರಿಶೀಲನೆ ನಡೆಯಲಿದೆ. ಈ ವೇಳೆ ಸರಿ ಇಲ್ಲದಿರುವುದು ಕಂಡು ಬಂದರೆ ಅಂತಿಮವಾಗಿ ಕ್ರಮವಹಿಸಲಾಗುವುದು. ಬಿ.ವೀರಪ್ಪ, ಉಪ ಲೋಕಾಯುಕ್ತ

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net