

ಕಿಕ್ಕೇರಿ: ಭವಿಷ್ಯದ ಮಕ್ಕಳ ಬರೆಯುವ ಕೈಗಳನ್ನು ದುಡಿಯುವ ಕೈಗಳಾಗಿ ಬಳಸಿಕೊಳ್ಳದಿರಿ ಎಂದು ಪ್ರಾಂಶುಪಾಲ ಎಸ್. ದೊರೆಸ್ವಾಮಿ ಸಲಹೆ ನೀಡಿದರು.
ಪಟ್ಟಣದ ಕೆಪಿಎಸ್ ಶಾಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದಿಂದ ಬುಧವಾರ ಆಯೋಜಿಸಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಮಕ್ಕಳ ಹಕ್ಕಾಗಿದೆ, ಬಡತನ ನೆಪದಲ್ಲಿ 14 ವರ್ಷದೊಳಗಿನ ಮಕ್ಕಳನ್ನು ದುಡಿಯಲು ಕಳಿಸುವುದು ಶಿಕ್ಷಾರ್ಹ ಅಪರಾಧ. ಗ್ಯಾರೇಜ್, ಹೋಟೆಲ್, ಕಾರ್ಖಾನೆ ಮತ್ತಿತರ ಸ್ಥಳಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡರೆ ಮಾಹಿತಿ ನೀಡಿ. ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಅಡ್ಡಿಯಾದ ಅನಿಷ್ಟ ಪದ್ಧತಿ ದೂರಮಾಡಲು ಎಲ್ಲರೂ ಸಹಕರಿಸಿ ಎಂದರು.
ಬಾಲಪರಾಧಿಗಳನ್ನು ಸಂರಕ್ಷಣೆ ಮಾಡಲು ಪುನರ್ವಸತಿ ಕೇಂದ್ರವಿದೆ. ಮಕ್ಕಳನ್ನು ದುಡಿಮೆ ಮಾಡಿಸಿಕೊಳ್ಳುವುದು ಜೀತಪದ್ಧತಿಯಂತಿದೆ. ಅರಿಯದ ಕಂದಮ್ಮಗಳನ್ನು ದುಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಮಕ್ಕಳ ಬದುಕಿಗೆ ಮಾರಕವಾಗಲಿದೆ. ಮಕ್ಕಳಿಗೆ ವಯಸ್ಸಿಗೆ ಮೀರಿದ ಸಾಮರ್ಥ್ಯದ ದುಡಿಮೆ ಇದಾಗಿದೆ. ಇದು ಮಕ್ಕಳ ಮಾನಸಿಕ, ದೈಹಿಕ ಶೋಷಣೆಯಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಅನಿಷ್ಟ ಪದ್ಧತಿ ದೂರ ಮಾಡಲು ಸಹಕರಿಸುವುದಾಗಿ ಪ್ರತಿಜ್ಞೆ ಮಾಡಿದರು.
ಎನ್.ರವೀಂದ್ರ, ಜಿ.ಎಸ್.ಕುಮಾರಸ್ವಾಮಿ, ಎ.ಎಂ. ಮಂಜುನಾಥ್, ಜಿ.ರಮೇಶ್, ಎನ್.ಎ.ನಾಗೇಶ್, ಎಂ. ವಿನಾಯಕ ಭಾಗವಹಿಸಿದ್ದರು.