

ಹಿರೀಸಾವೆ: ವ್ಯಾಪರೀಕರಣದ ಸಲುವಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸಬಾರದು ಎಂದು ಹೊಯ್ಸಳ ನ್ಯಾಷನಲ್ ಸ್ಕೂಲ್‌ನ ಕಾರ್ಯದರ್ಶಿ ಮೆಡಿಕಲ್ ರಾಮೇಗೌಡ ಹೇಳಿದರು.
ಹೋಬಳಿಯ ದಿಡಗ ಗ್ರಾಮದ ಹೊಯ್ಸಳ ನ್ಯಾಷನಲ್ ಸ್ಕೂಲ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸರಸ್ವತಿ ಪೂಜೆ ಹಾಗೂ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕಲ್ಪಿಸಬೇಕು ಎಂದರು.
ಹಣ ಗಳಿಸಲು ಶಿಕ್ಷಣ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಉತ್ತಮ ಬೆಳವಣಿಗೆಯಲ್ಲ. ಬದಲಿಗೆ ಸಮಾಜದ ಏಳಿಗೆ ಸಲುವಾಗಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಶಿಕ್ಷಣವನ್ನು ಉಚಿತವಾಗಿ ನೀಡಲು ಸಾಧ್ಯವಿಲ್ಲ. ಆದರೆ ಪಾಲಕರಿಗೆ ತೊಂದರೆಯಾಗದಂತೆ ವ್ಯವಸ್ಥೆಗೆ ಪೂರಕವಾಗಿ ಅಗತ್ಯ ಶುಲ್ಕ ಪಡೆದರೆ ಸೂಕ್ತ ಎಂದು ತಿಳಿಸಿದರು.
ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಹಾಗೂ ಜವಾಬ್ದಾರಿ ಪ್ರಮುಖವಾಗಿದೆ. ಶಾಲೆಯಲ್ಲಿ ಶಿಕ್ಷಕರು ನೀಡುವ ಮೌಲ್ಯಯುತ ಶಿಕ್ಷಣದ ಜತೆಗೆ ಮನೆಯಲ್ಲಿ ಪಾಲಕರು ಸಂಸ್ಕಾರ ನೀಡುವುದು ಅಗತ್ಯವಿದೆ ಎಂದು ಪಾಲಕರಿಗೆ ಸಲಹೆ ನೀಡಿದರು.
ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಶೈಕ್ಷಣಿಕ ಸಂಬಂಧ ಮಾತ್ರ ಇರಬೇಕು. ಉಳಿದ ಹಣಕಾಸು ಇಲ್ಲವೆ ಇತರ ವ್ಯವಹಾರವೂ ಪಾಲಕರು ಹಾಗೂ ಆಡಳಿತ ವರ್ಗದ ಮಧ್ಯೆ ಗೌಪ್ಯವಾಗಿರಬೇಕು. ಇದರಿಂದ ಶೈಕ್ಷಣಿಕ ವ್ಯವಸ್ಥೆ ತಿಳಿಯಾಗಿರಲಿದೆ ಎಂದರು.
ಹೊಯ್ಸಳ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಬಿ.ಎಚ್.ನಂದೀಶ್ ಮಾತನಾಡಿ, ಮಕ್ಕಳ ಮನಸ್ಸು ಮೆದುವಾದ ಮಣ್ಣಿನಂತೆ. ಮೌಲ್ಯಯುತ ಶಿಕ್ಷಣ ಎಂಬ ನೀರೆರೆದು ಹದಗೊಳಿಸಿ ಮಡಿಕೆ ಮಾಡಿದರೆ ನೂರಾರು ಕಾಲ ಚಿರವಾಗಿ ಉಳಿಯಲಿದೆ ಎಂದರು.
ಉತ್ತಮ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶಕುಂತಲಾ ರಾಮೇಗೌಡ, ಹೊಯ್ಸಳ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಬಿ.ಎಚ್.ನಂದೀಶ್, ಸಹಶಿಕ್ಷಕ ಪುಟ್ಟೇಗೌಡ, ಶಾಲಾ ಉಸ್ತುವಾರಿ ರೋಹಿತ್, ಹೊಯ್ಸಳ ನ್ಯಾಷನಲ್ ಸ್ಕೂಲ್ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಪಾಲಕರು ಇದ್ದರು.