ಫಲಾನುಭವಿ ಆಯ್ಕೆ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣಗೊಳಿಸಲು ಸಚಿವ ಶಿವರಾಜ ತಂಗಡಗಿ ತಾಕೀತು

Published on

ಕಲಬುರಗಿ ವಿಭಾಗದ ಹಿಂದುಳಿದ‌ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ:

ವಿಜಯವಾಣಿ ಸುದ್ದಿಜಾಲ ಕಲಬುರಗಿ

:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ನಿಗಮಗಳಲ್ಲಿ ಹಿಂದಿನ ವರ್ಷ‌ ಸೇರಿದಂತೆ ಪ್ರಸಕ್ತ‌ 2023-24ನೇ‌ ಸಾಲಿನ ಫಲಾನುಭವಿ  ಆಯ್ಕೆ‌ಯನ್ನು ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ಣಗೊಳಿಸಬೇಕೆಂದು ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಹಾಗೂ  ಸಚಿವ ಶಿವರಾಜ ಎಸ್. ತಂಗಡಗಿ ಅಧಿಕಾರಿಗಳಿಗೆ ಗಡುವು ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಇಲಾಖೆ ವ್ಯಾಪ್ತಿಯ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಹಿಂದಿನ ವರ್ಷದ ಗುರಿಯನ್ನು ಇದೂವರೆಗೆ ಸಾಧಿಸದಿದ್ದಕ್ಕೆ ಸಿಡಿಮಿಡಿಗೊಂಡ‌  ಸಚಿವರು, ಹಿಂದುಳಿದ ವರ್ಗದವರಿಗೆ‌ ನ್ಯಾಯ ಕೊಡಿಸುವತ್ತ ಅಧಿಕಾರಿಗಳು ಮುಂದಾಗಬೇಕು ಎಂದರು.

ಫಲಾನುಭವಿ ಆಯ್ಕೆ‌‌ ವಿಚಾರದಲ್ಲಿ ಶಾಸಕರು ಆಯ್ಕೆ‌ ಪಟ್ಟಿ ಅಂತಿಮಗೊಳಿಸಿಲ್ಲ ಎಂದು ಹೇಳುವುದನ್ನು ಒಪ್ಪುವುದಿಲ್ಲ. ಶಾಸಕರಿಗೆ ಹತ್ತಾರು ಕೆಲಸ‌ ಇರುತ್ತೆ. ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಆಯ್ಕೆ‌ ಅಂತಿಮಗೊಳಿಸಬೇಕು ಎಂದು‌ ವಿಭಾಗದ ಎಲ್ಲಾ‌ ನಿಗಮದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ‌ ಸೂಚನೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ ಎಂ.ಎಲ್.ಸಿ. ತಿಪ್ಪಣಪ್ಪ ಕಮಕನೂರ ಮಾತನಾಡಿ,‌ ಬಿ.ಸಿ.ಎಂ. ನಿಗಮಕ್ಕೆ ಸಾಲ‌ ಸೌಲಭ್ಯ ಕೋರಿ ಬರುವವರಿಗೆ ಕಲಬುರಗಿ ಕಚೇರಿಯಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಕೊಡಲ್ಲ. ನಿಗಮವು ಸಾಲ ನೀಡಲು ಸತಾಯಿಸಿದರೆ ಬಡ ಜನರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.‌ ಆಗ ಸಚಿವ‌ ಶಿವರಾಜ ಎಸ್. ತಂಗಡಗಿ ಮಾತನಾಡಿ, ಬಡ ಜನರ‌ ಕಲ್ಯಾಣಕ್ಕೆ ನಿಗಮ ಸ್ಥಾಪಿಸಿದೆ. ನಿಮಗೆ ಕಾರು, ಕಚೇರಿ, ಸಂಬಳ ನೀಡಲಾಗುತ್ತಿದೆ. ಬಡವರ ಕಲ್ಯಾಣ ಮಾಡದಿದ್ದರೆ‌ ನೀವಿದ್ದು ಏನು ಪ್ರಯೋಜನ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net