

ಹಾಸನ: ಕಾಂಗ್ರೆಸ್ ಒಳಗೆ ಅವಕಾಶ ತಪ್ಪುವ ಆತಂಕದಿಂದ ಡಿ.ಕೆ.ಶಿವಕುಮಾರ್ ಬಿಜೆಪಿಯ ದೆಹಲಿ ನಾಯಕರಿಂದ ಕರೆ ಬಂದಿತ್ತು ಎಂದು ಹೇಳುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಗುರುವಾರ ಹಾಸನಾಂಬ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ವೇಳೆ ಅವರಿಗೆ ಕರೆ ಬಂದಿದ್ದರೆ ಅದನ್ನು ಅವರು ನಿರಾಕರಿಸುತ್ತಿದ್ದರು ಎನ್ನುವುದನ್ನು ಒಪ್ಪಲು ಆಗಲ್ಲ. ಈಗ ರಾಜಕಾರಣಿಗಳ ಮಾತಿನಲ್ಲಿ ಎಲ್ಲ್ಲ ಕಾಲದಲ್ಲಿ ಸತ್ಯ ಇರುತ್ತದೆ ಎಂದು ಭಾವಿಸಬಾರದು. ಅವರು ಸುಳ್ಳು ಹೇಳುತ್ತಿದ್ದಾರೋ, ನಿಜ ಹೇಳುತ್ತಿದ್ದಾರೋ ಅವರಿಗೇ ಗೊತ್ತು ಎಂದರು.
ನಿಸ್ವಾರ್ಥ ಸೇವೆಗೆ ಹೆಸರು ಆರ್‌ಎಸ್‌ಎಸ್. ದೇಶದ್ರೋಹ, ಮತೀಯವಾದ ಹೇಳೋರನ್ನು, ಜಾತಿವಾದ ಮಾಡೋರನ್ನು ನಿಷೇಧ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಬಹುದಿತ್ತು. ನಿಮ್ಮ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಿ. ನಿಮ್ಮ ಮಾತಿನ ಲಾಭ ದೇಶದ್ರೋಹಗಳಿಗೆ, ಸಮಾಜಘಾತುಕರಿಗೆ ಆಗುತ್ತದೆ. ಜಾತಿ-ಜಾತಿ ಎತ್ತಿಕಟ್ಟಿ ಸಮಾಜ ಒಡೆಯುವ ವ್ಯಕ್ತಿಗಳಿಗೆ, ಶಕ್ತಿಗಳಿಗೆ ಆಗುತ್ತದೆ. ರಾಷ್ಟ್ರ ಭಕ್ತ ಸಂಘಟನೆ ವಿರುದ್ಧ ಅಪಪ್ರಚಾರ ಮಾಡುತ್ತ ಯಾರಿಗೆ ಲಾಭ ಮಾಡಿಕೊಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು.
ದೇಶ ಭಕ್ತಿಯ ಶಿಕ್ಷಣ ಅಪರಾಧವೇ? ಜಾತಿ ವ್ಯವಸ್ಥೆ ಅಳಿಸುವ ಬಗ್ಗೆ ಜಾಗೃತಿ ತಪ್ಪೇ? ಆರ್‌ಎಸ್‌ಎಸ್‌ಗೆ ಸದಸ್ಯತ್ವದ ಅಗತ್ಯ ಇಲ್ಲ. ಬನ್ನಿ ಶಾಖೆಗೆ, ಅಲ್ಲಿ ನಿಮಗೆ ಒಪ್ಪಿಗೆ ಆಗದಿದ್ದರೆ ಹೇಳಿ ಎಂದು ಆಹ್ವಾನ ನೀಡಿದರು.
ಸುಧಾಮೂರ್ತಿ ಅವರು ಸಮೀಕ್ಷೆ ನಿರಾಕರಣೆ ವಿಚಾರ ಪ್ರತಿಕ್ರಿಯಿಸಿ, ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಆಯೋಗವು ಪತ್ರಿಕಾ ಪ್ರಕಟಣೆ ಕೊಟ್ಟು ಹೇಳಿದೆ. ಜಾತಿಗಣತಿಗೆ ಮಾಹಿತಿ ಕೊಡಬೇಕಿರುವುದು ಕಡ್ಡಾಯ ಅಲ್ಲ. ಗಣತಿಯ ಉದ್ದೇಶ ಏನು? ಜಾತ್ಯತೀತ ರಾಷ್ಟ್ರ ನಿರ್ಮಾಣವೇ? ಸಾಮಾಜಿಕ ನ್ಯಾಯವೇ ಉದ್ದೇಶವಾಗಿದ್ದರೆ ಆ ಉದ್ದೇಶವನ್ನು ಈಡೇರಿಸುವ ಸಂಕಲ್ಪ ಶಕ್ತಿ ಕಾಂಗ್ರೆಸ್‌ಗೆ ಇಲ್ಲವೇ? ನಾಗಮೋಹನ್‌ದಾಸ್, ಕಾಂತರಾಜು ವರದಿ ಕಸದಬುಟ್ಟಿ ಸೇರಿತು. ಮಂಡಲ್ ಆಯೋಗದ ವರದಿಯನ್ನು ಕುರ್ಚಿಯಡಿ ಹಾಕಿಕೊಂಡು ದಶಕಗಳ ಕಾಲ ಕಾಂಗ್ರೆಸ್ ಕೂತಿತ್ತು. ಮಂಡಲ್ ವರದಿ ರಿಪೋರ್ಟ್ ಏನಾಯ್ತು? ಇವರಿಗೆ ಇಚ್ಛಾಶಕ್ತಿ ಇಲ್ಲ. ಕೇವಲ ಜಾತಿ, ಜಾತಿಗಳ ನಡುವೆ ಎತ್ತಿಕಟ್ಟಲು, ಸಮಾಜ ಒಡೆಯಲು, ಜನರನ್ನು ಪ್ರಮುಖ ಸಮಸ್ಯೆಗಳಿಂದ ಬೇರೆ ಕಡೆಗೆ ವಿಷಯಾಂತರ ಮಾಡಲು ಸಾಂದರ್ಭಿಕವಾಗಿ ರಾಜಕೀಯ ಸಾಧನವಾಗಿ ಮಾಡಿಕೊಳ್ಳುತ್ತಿದ್ದೀರಿ ಎಂದು ಕಿಡಿಕಾರಿದರು.
ನಿಮ್ಮಿಂದ ಒಳ್ಳೆಯದಾಗಲ್ಲ, ನಿಮಗೆ ಜಾತಿಯನ್ನು ಅಳಿಸಬೇಕೆಂದಿದ್ದರೆ, ಬಡತನವೇ ಮಾನದಂಡ ಸಾಕಿತ್ತು. ಸಾಮಾಜಿಕ ಅಸ್ಪಶ್ಯತೆ ನಿವಾರಣೆ ಮಾಡಬೇಕು ಎಂದಿದ್ದರೆ ಸಾಮಾಜಿಕ ಪರಿವರ್ತನೆಯ ಶಿಕ್ಷಣ ಕೊಡುವ ಸಂಘಟನೆಗಳನ್ನು ನಿಷೇಧ ಮಾಡುತ್ತಿರಲಿಲ್ಲ ಎಂದರು.