ಡಿಕೆಶಿ - ಎಚ್​ಡಿಕೆ ಜಂಗೀಕುಸ್ತಿಗೆ ಮತ್ತೊಂದು ವೇದಿಕೆ

DKS-HDK
Supporters of Karnataka Congress Senior Leader DK Shivakumar celebrate by bursting crackers and greet him for his appointment as Karnataka Congress president at his residence in Sadashivnagar, in Bengaluru on Wednesday 11th March 2020 Pics: www.pics4news.com
Published on

ವಿವಾದದ ಕಿಡಿ ಎಬ್ಬಿಸಿದ ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರ ಪರಸ್ಪರ ನೇರಾನೇರ ಹೋರಾಟ

ಗಂಗಾಧರ್​ ಬೈರಾಪಟ್ಟಣ ರಾಮನಗರ
ಜಿಲ್ಲೆಯ ಹೆಸರು ಬದಲಾವಣೆ ವಿಚಾರ ಈಗ ವಿವಾದದ ಕಿಡಿ ಎಬ್ಬಿಸಿದೆ. ಇದರೊಂದಿಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್​ ನಡುವಿನ ದಶಕಗಳ ಜಂಗೀ ಕುಸ್ತಿಗೆ ಮತ್ತೊಂದು ವೇದಿಕೆ ನಿರ್ಮಿಸಿದೆ.

ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲಿಯೇ ಡಿ.ಕೆ. ಶಿವಕುಮಾರ್​ ಮತ್ತು ಎಚ್​.ಡಿ. ದೇವೇಗೌಡರ ಕುಟುಂಬದ ನಡುವಿನ ಕಾದಾಟಕ್ಕೆ ಸುಮಾರು 4 ದಶಕಗಳ ಇತಿಹಾಸವಿದೆ. ದೇವೇಗೌಡರ ಕುಟುಂಬ ಅವಿಭಜಿತ ಬೆಂಗಳೂರು ಜಿಲ್ಲೆಯಲ್ಲಿ ರಾಜಕೀಯವಾಗಿ ಬೇರು ಬಿಡುತ್ತಿದ್ದಂತೆ ಅವಕಾಶ ಸಿಕ್ಕಾಗಲೆಲ್ಲಾ ಡಿ.ಕೆ. ಶಿವಕುಮಾರ್​ ಅವರು ಹೊರಗಿನವರು ಎನ್ನುವ ದಾಳ ಉರುಳಿಸಿ ತವರು ಜಿಲ್ಲೆಯ ಜನತೆಯ ಮನಗೆಲ್ಲುವ ಪ್ರಯತ್ನ ಮಾಡುತ್ತಲೇ ಇದ್ದರು.

ಇದರಿಂದಾಗಿ ಎರಡೂ ರಾಜಕೀಯ ಪಕ್ಷಗಳು ಎನ್ನುವುದಕ್ಕಿಂತ ಎರಡೂ ಕುಟುಂಬಗಳ ನಡುವಿನ ಕಾಳಗ ಆಗಾಗ ತಾರಕಕ್ಕೆ ಏರುತ್ತಲೇ ಇರುತ್ತಿತ್ತು. ಇದೀಗ ಎಚ್​.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರಚನೆಗೊಂಡಿರುವ ರಾಮನಗರ ಜಿಲ್ಲೆಗೆ ಮರು ನಾಮಕರಣ ಮಾಡುವ ಯತ್ನಕ್ಕೆ ಕೈಹಾಕುವ ಮೂಲಕ ಡಿ.ಕೆ.ಶಿವಕುಮಾರ್​ ಮತ್ತೊಂದು ಸುತ್ತಿನ ಜಿದ್ದಾಜಿದ್ದಿಗೆ ವೇದಿಕೆ ನಿರ್ಮಿಸಿದ್ದಾರೆ.

ನೇರಾನೇರ ಹೋರಾಟ

ಡಿ.ಕೆ. ಶಿವಕುಮಾರ್​ ಅವರ ಚುನಾವಣಾ ಜೀವನ ಆರಂಭಗೊಂಡಿದ್ದೇ ಎಚ್​.ಡಿ.ದೇವೇಗೌಡರ ವಿರುದ್ಧ ಕಣಕ್ಕೆ ಇಳಿಯುವ ಮೂಲಕ. 1985ರಲ್ಲಿ ಪ್ರಥಮ ಬಾರಿಗೆ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಎಚ್​.ಡಿ. ದೇವೇಗೌಡರ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಡಿಕೆಶಿ ಚುನಾವಣೆಯಲ್ಲಿ ಸೋಲುವ ಮೂಲಕ ಶಕ್ತಿಯನ್ನು ಹೆಚ್ಚಿಸಿಕೊಂಡರು. ಇದಾದ ನಂತರ 1987ರಲ್ಲಿ ಸಾತನೂರು ಕ್ಷೇತ್ರದಿಂದ ಜಿಪಂ ಸದಸ್ಯರಾಗಿಯೂ ಆಯ್ಕೆಗೊಂಡಿದ್ದರು.

ಆದರೆ, ಅಪ್ಪನ ವಿರುದ್ಧ ಸೋತಿದ್ದ ಡಿಕೆಶಿ, ಸಾತನೂರು ಕ್ಷೇತ್ರದಲ್ಲಿ 1999ರ ಚುನಾವಣೆಯಲ್ಲಿ ಎಚ್​.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ಬಲಪ್ರದರ್ಶನ ಮಾಡಿದ್ದರು. 2002ರಲ್ಲಿ ನಡೆದ ಕನಕಪುರ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. 2006ರಲ್ಲಿ ದೇವೇಗೌಡರ ವಿರುದ್ಧ ಪತ್ರಕರ್ತೆ ತೇಜಸ್ವಿನಿಗೌಡ ಅವರನ್ನು ಕಣಕ್ಕೆ ಇಳಿಸಿ ಎಚ್​ಡಿಡಿ ಅವರಿಗೆ ಸೋಲುಣಿಸಿದ್ದರು. ಹೀಗೆ ಅವಕಾಶ ಸಿಕ್ಕಾಗಲೆಲ್ಲಾ ದೇವೇಗೌಡರ ಕುಟುಂಬದ ವಿರುದ್ಧ ಡಿಕೆಶಿ ರಾಜಕೀಯವಾಗಿ ಸೆಣಸುತ್ತಲೇ ಇದ್ದಾರೆ.

ಕಾದಾಟದ ಗೂಳಿಗಳು


2018ರಲ್ಲಿ ಮಿಶ್ರ ಫಲಿತಾಂಶದ ಫಲವಾಗಿ ರಚನೆಗೊಂಡ ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷದ ಸೂಚನೆಯಂತೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಡಿ.ಕೆ.ಶಿವಕುಮಾರ್​ ಪಾತ್ರವೂ ಇದೆ. ಒಂದು ಕಾಲದಲ್ಲಿ ಪರಸ್ಪರ ಹೋರಾಟ ನಡೆಸುತ್ತಿದ್ದ ಇಬ್ಬರೂ ನಾಯಕರು ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜೋಡೆತ್ತುಗಳು ಎನ್ನುವ ರೀತಿಯಲ್ಲಿ ಬಿಂಬಿತವಾದರು. ಇವರ ಹೋರಾಟದ ಹೊರತಾಗಿಯೂ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಮಕಾಡೆ ಮಲಗಿದವು. ಆದರೆ ಈಗ ರಾಮನಗರ ಜಿಲ್ಲೆ ವಿಚಾರದಲ್ಲಿ ಕಾದಾಟದ ಗೂಳಿಗಳಂತೆ ಸ್ಫರ್ಧೆಗೆ ಇಳಿದಿದ್ದಾರೆ.

ಮರುಕಳಿಸುವುದೇ ಘಟನೆ?

ಎಚ್​.ಡಿ. ಕುಮಾರಸ್ವಾಮಿ ಅವರು ಪ್ರಥಮ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಕಾಲ. 2007ರ ಆಗಸ್ಟ್​ನಲ್ಲಿ ಡಿ.ಕೆ.ಶಿವಕುಮಾರ್​ ಬಗ್ಗೆ ಮಾತನಾಡುವ ವೇಳೆ, ಅವರ ಜನ್ಮದ ಬಗ್ಗೆಯೂ ಮಾತು ಹರಿಬಿಟ್ಟಿದ್ದರು. ಇದನ್ನು ಸವಾಲಾಗಿ ಸ್ವೀಕಾರ ಮಾಡಿದ್ದ ಡಿ.ಕೆ.ಶಿವಕುಮಾರ್​, ಸಾತನೂರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತಮ್ಮ ತಾಯಿ ಗೌರಮ್ಮ ಅವರನ್ನೇ ಕರೆತಂದು ಎಚ್​ಡಿಕೆಗೆ ಸವಾಲು ಹಾಕಿದ್ದರು.

ಈ ಘಟನೆ ಸಾತನೂರನ್ನು ತಲ್ಲಣಗೊಳಿಸಿತ್ತು. ಇಡೀ ಖಾಕಿ ಪಡೆಯೇ ಸಾತನೂರಿನಲ್ಲಿ ಬೀಡುಬಿಟ್ಟಿತ್ತು. ಈ ವೇಳೆ ಡಿ.ಕೆ.ಶಿವಕುಮಾರ್​ ತಾಯಿ ತಮಗೂ ತಾಯಿ ಇದ್ದಂತೆ ಎಂದು ಹೇಳುವ ಮೂಲಕ ಉಂಟಾಗಿದ್ದ ಬಿಗುವಿನ ವಾತಾವರಣಕ್ಕೆ ಎಚ್​ಡಿಕೆ ತೆರೆ ಎಳೆದಿದ್ದರು.

ಈಗ ಮತ್ತೆ ರಾಮನಗರ ಜಿಲ್ಲೆ ಮರುನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ನಾಯಕರೂ ಜಿದ್ದಿಗೆ ಬಿದ್ದಿದ್ದಾರೆ. ಎಚ್​ಡಿಕೆ ವಿರುದ್ಧ ತನ್ನ ಕೈಮೇಲಾಗಲೇಬೇಕು ಎನ್ನುವ ಹಠ ಡಿಕೆಶಿ ಅವರದ್ದಾದರೆ, ಇದಕ್ಕೆ ಅವಕಾಶವನ್ನೇ ನೀಡುವುದಿಲ್ಲ ಎನ್ನುವ ಪ್ರತಿರೋಧವನ್ನು ಎಚ್​ಡಿಕೆ ಒಡ್ಡಿದ್ದಾರೆ. ಇಬ್ಬರೂ ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡುವ ಮೂಲಕ ಹಿಂದಿನ ಘಟನೆ ಮರುಕಳಿಸುವ ಸೂಚನೆಯನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net