

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಸಮ್ಮತಿಸಿರುವ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ.
ಸರ್ಕಾರದ ಆದೇಶ ರದ್ದುಪಡಿಸಲು ನಿರಾಕರಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಆಪ್ತ ಶಶಿಕುಮಾರ್ ಶಿವಣ್ಣ ಸಲ್ಲಿಸಿರುವ ಅರ್ಜಿಯನ್ನು ಸಿಜೆ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಸಿಬಿಐ ಪರ ವಕೀಲರು ಹಾಜರಾಗಿ, ಮೇಲ್ಮನವಿ ಸಂಬಂಧ ಸೆ.7ರಂದು ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಅದು ಸೆ.28ರ ರಾತ್ರಿ ನಮ್ಮ ಕೈಸೇರಿದೆ. ಆದ್ದರಿಂದ ಮೇಲ್ಮನವಿ ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು.