

ಗಂಗಾವತಿ: ದುಬಾರಿ ದರ, ದುಡಿಮೆಗೆ ಬರ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ವಹಿವಾಟು ನೀರಸವಾಗಿದ್ದು, ನಿರೀಕ್ಷಿತ ವ್ಯಾಪಾರವಾಗುತ್ತಿಲ್ಲ.
ಇದನ್ನೂ ಓದಿ:ಮಳೆಯ ಅಬ್ಬರದ ಮಧ್ಯೆ ದೀಪಾವಳಿ ಸಂಭ್ರಮ
ದಸರಾ ಹಬ್ಬದ ಸಂದರ್ಭದಲ್ಲಿ ಎದುರಾದ ಬೆಲೆ ಏರಿಕೆ ಬಿಸಿ, ದೀಪಾವಳಿಯಲ್ಲೂ ಮುಂದುವರೆದಿದೆ. ಹೂ, ಹಣ್ಣು, ಕಾಯಿ ಸೇರಿ ಪೂಜೆ ಹಾಗೂ ಅಲಂಕಾರಿಕ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜಿಎಸ್‌ಟಿ ಹೊರೆ ಬಿಟ್ಟರೆ, ಬೆಲೆಯಲ್ಲೇನೂ ವ್ಯತ್ಯಾಸವಿಲ್ಲ. ದುಬಾರಿ ಬೆಲೆ ಹಿನ್ನೆಲೆಯಲ್ಲಿ ಗ್ರಾಹಕರು ಖರೀದಿಸುತ್ತಿಲ್ಲ. ಬಹು ನಿರೀಕ್ಷೆ ಮೇರೆಗೆ ವಸ್ತುಗಳನ್ನು ಆಮದು ಮಾಡಿಕೊಂಡ ವ್ಯಾಪಾರಿಗಳಿಗೆ ನಷ್ಟದ ಬಿಸಿ ತಟ್ಟುತ್ತಿದೆ.
ನಗರದ ಗುಂಡಮ್ಮಕ್ಯಾಂಪ್ ಮಾರುಕಟ್ಟೆ ಪ್ರಾಂಗಣ, ಗಣೇಶ ಮತ್ತು ಸಿಬಿಎಸ್ ವೃತ್ತದಲ್ಲಿ ಬಾಳೆ ಕಂಬ, ಅಡಕೆ, ಚೆಂಡುಹೂ, ಕಬ್ಬು, ಸೇವಂತಿಗೆ, ಮಾವಿನ ಎಲೆಗಳ ಮಾರಾಟ ಮಾಡಲಾಗುತ್ತಿದೆ. ಹಣ್ಣುಗಳು ಒಂದು ಕೆ.ಜಿಗೆ 100-200ರೂ. ದಾಟಿದ್ದು, ಬಾಳೆ ಕಂಬ, ಕಬ್ಬು, ಅಡಕೆ, ಚೆಂಡು ಹೂವಿನ ಗಿಡಗಳು 30-100ರೂ.ಗೆ ಮೀಸಲಾಗಿದೆ. ಚೀನಾದ ಅಕಾಶ ಬುಟ್ಟಿಗಳಿಗೆ ಬೇಡಿಕೆಯಿದ್ದು, 300ರೂ.ಗಳಿಗಿಂತ ಕಡಿಮೆ ಇಲ್ಲ. ಬಟ್ಟೆ ಅಂಗಡಿಗಳಲ್ಲೂ ಸಂಪ್ರದಾಯಕ್ಕೆ ಎಂಬಂತೆ ಖರೀದಿಸುತ್ತಿದ್ದು, ಗ್ರಾಹಕರ ಅಬ್ಬರವಿಲ್ಲ. ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆ ಹಾಕಲಾಗಿದ್ದು, ಅಲ್ಲಿಯೂ ಮಾರಾಟದ ಸದ್ದಿಲ್ಲ.
ಟ್ರಾಫಿಕ್ ಕಿರಿಕಿರಿ, ಧೂಳಿನ ವರೀ: ಗಾಂಧಿ, ಮಹಾವೀರ, ಸಿಬಿಎಸ್, ಗಣೇಶ ವೃತ್ತ ಮತ್ತು ಓಎಸ್‌ಬಿ ಪ್ರಮುಖ ರಸ್ತೆಯಲ್ಲಿ ವಹಿವಾಟು ನಡೆಯುತ್ತಿದ್ದು, ಟ್ರಾಫಿಕ್ ಕಿರಿಕಿರಿ ಮಿತಿಮೀರಿದೆ. ಇನ್ನೂ ರಸ್ತೆಗಳೆಲ್ಲ ಹಾಳಾಗಿರುವುದರಿಂದ ಧೂಳಿನ ಸಮಸ್ಯೆ ಹೆಚ್ಚಾಗಿದ್ದು, ಗುಂಡಿಗಳದ್ದೇ ಸಾಮ್ರಾಜ್ಯ ಎನ್ನುವಂತಿದೆ. ಇಸ್ಪೀಟ್, ಜೂಜಾಟ ನಿಷೇಧದ ಬಗ್ಗೆ ಪೊಲೀಸ್ ಇಲಾಖೆ ರ್ಮಾನು ಹೊರಡಿಸಿದ್ದರೂ, ಬಹುತೇಕ ಅಂಗಡಿಗಳಲ್ಲಿ ಜೂಜಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸರ ಕ್ರಮದ ಮೇಲೆ ಜೂಜಾಟ ಅವಲಂಭಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದಿಂದ ಅಮದಾಗಿರುವ ಹಣತೆಗಳೊಂದಿಗೆ ಸ್ಥಳೀಯ ಕುಂಬಾರರು ತಯಾರಿಸಿದ ಹಣತೆಗಳು ಪೈಪೋಟಿಗಿಳಿದಿವೆ.