ಮಳೆಯ ಅಬ್ಬರದ ಮಧ್ಯೆ ದೀಪಾವಳಿ ಸಂಭ್ರಮ

Published on

ಮಂಗಳೂರು: ಮಳೆಯ ಮಧ್ಯೆಯೂ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆಮಾಡಿದೆ. ಒಂದೆಡೆ ದೀಪಾವಳಿಗೆ ಹಸಿರು ಪಟಾಕಿಗಳ ಖರೀದಿ ಭರಾಟೆ ಜೋರಾಗಿದ್ದರೆ, ಇನ್ನೊಂದೆಡೆ ಗೂಡುದೀಪಗಳು, ಹಣತೆಗಳು ಎಲ್ಲೆಡೆ ರಾರಾಜಿಸುತ್ತಿರುವ ಮಧ್ಯೆ ಸಂಜೆ ಮಳೆಯ ಅಬ್ಬರವು ಜೋರಾಗಿದೆ.

ಧಾರ್ಮಿಕತೆಯ ಜೊತೆಗೆ ಸಾಂಸ್ಕೃತಿಕತೆಯನ್ನು ಒಳಗೊಂಡಿರುವ ದೀಪಾವಳಿ ಬಂತೆಂದರೆ ಸಂಭ್ರಮ ಮನೆ ಮಾಡುತ್ತದೆ. ಮಕ್ಕಳಿಗೆ ಪಟಾಕಿ ಹಚ್ಚಿ ಸಂಭ್ರಮಿಸುವುದೇ ಖುಷಿ. ಹಣತೆಗಳನ್ನು ಮನೆಯ ಜಗಲಿಯುದ್ದಕ್ಕೂ ಜೋಡಿಸಿ ದೀಪ ಬೆಳಗಿ ಮನೆ ಮಂದಿ ಸಂಭ್ರಮಿಸುವ ಆ ಖುಷಿಗೆ ಬೆಲೆ ಕಟ್ಟಲಾಗದು. ದೀಪಾವಳಿ ಹತ್ತಿರವಾಗುತ್ತಿದ್ದಂತೆ ಮನೆಯ ಮುಂದೆ ಗೂಡುದೀಪವೊಂದು ಸ್ಥಾನ ಪಡೆಯುತ್ತದೆ. ದೂರದ ಊರುಗಳಲ್ಲಿ ಉದ್ಯೋಗ ಕಂಡುಕೊಂಡವರು ಕೂಡ ವರ್ಷಕ್ಕೊಮ್ಮೆ ಬರುವ ದೀಪಾವಳಿಗೆ ಮನೆಗೆ ಬರಲು ಕಾತರರಾಗಿರುತ್ತಾರೆ. ಅಂತಹ ಬಾಂಧವ್ಯವನ್ನು ಹೊಂದಿರುವ ಈ ಹಬ್ಬ ಈ ಬಾರಿಯೂ ಎಲ್ಲೆಡೆ ಆಚರಿಸಲಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಹೂ ಹಣ್ಣು, ತರಕಾರಿ, ದಿನಸಿ ಪದಾರ್ಥಗಳ ವ್ಯಾಪಾರ ಗರಿಗೆದರಿದ್ದರೆ, ವಾಹನ ಖರೀದಿ, ಗೃಹೋಪಯೋಗಿ ವಸ್ತುಗಳ ಖರೀದಿ ಕೂಡ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿಶೇಷತೆಯಿಂದ ಕೂಡಿದ ಗೂಡು ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸ್ಥಳೀಯ ಸೇರಿದಂತೆ ಮುಂಬೈ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ಕಡೆಗಳಿಂದ ಗೂಡು ದೀಪಗಳು ಮಾರಾಟಕ್ಕೆ ಲಭ್ಯ.

ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಖರೀದಿ ಭರಾಟೆ ಜೋರಾಗಿದೆ. ಹೂವು ಹಣ್ಣುಗಳನ್ನು ಖರೀದಿಸುವ ದೃಶ್ಯಗಳು ನಗರದಾದ್ಯಂತ ಕಂಡುಬರುತ್ತಿವೆ. ಪಟಾಕಿ ಅಂಗಡಿಗಳಲ್ಲಿ ಕೂಡ ಜನ ತಮಗೆ ಬೇಕಾದ ಪಟಾಕಿಗಳನ್ನು ಖರೀದಿಸುತ್ತಿರುವುದು ದೀಪಾವಳಿಯ ಸಂಭ್ರಮವನ್ನು ಸಾರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net