ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದ ವೇಳೆ ಪುತ್ತೂರಿನ ದಿವಿತ್​ ರೈ ರಚಿಸಿದ್ದ ಕವನ ಈಗ 8ನೇ ತರಗತಿ ಪಠ್ಯಕ್ಕೆ ಸೇರ್ಪಡೆ

divit u rai
Published on

ಪುತ್ತೂರು: ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ದಿವಿತ್​ ಯು. ರೈ ಎಂಬುವವರು 10ನೇ ತರಗತಿ ಓದುತ್ತಿರುವಾಗ ರಚಿಸಿದ್ದ ಆಂಗ್ಲ ಕವನ ಇದೀಗ 8ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಸೇರ್ಪಡೆಯಾಗಿದೆ.

ಉದಯ ಕುಮಾರ್​ ರೈ ನೀಲಂಪಾಡಿ ಮತ್ತು ಪ್ರತಿಮಾ ಯು. ರೈ ದಂಪತಿ ಪುತ್ರ ದಿವಿತ್​, ಸದ್ಯ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಎರಡನೇ ವರ್ಷದ ಬಿಇ ​ವಿದ್ಯಾರ್ಥಿ. 4 ವರ್ಷದ ಹಿಂದೆ ಅಂದರೆ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವಾಗ ದಿವಿತ್​ ರಚನೆಯ "ಸಿಂಪಲ್​ ಲೈಫ್​'' ಎಂಬ ಆಂಗ್ಲ ಕವನ ಸಂಕಲನ ಬಿಡುಗಡೆಯಾಗಿತ್ತು. ಆ ಕೃತಿಯ "ಮದರ್​ ಅರ್ಥ್​'' ಕವನವನ್ನು ರಾಜ್ಯ ಸರ್ಕಾರ ಈ ಬಾರಿಯ 8ನೇ ತರಗತಿಯ ಕಲಿಕಾ ಚೇತರಿಕೆ ಪಠ್ಯದಲ್ಲಿ ಅಳವಡಿಸಿದೆ.

ದಿವಿತ್​ ಪುತ್ತೂರಿನ ಹಾರಾಡಿ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಕಲಿಯುತ್ತಿದ್ದ ವೇಳೆ "ಡ್ಯೂ ಡ್ರಾಪ್ಸ್​'' ಎಂಬ ಆಂಗ್ಲ ಕವನ ಸಂಕಲನ ರಚಿಸಿ ಬಿಡುಗಡೆಗೊಳಿಸಿದ್ದರು.

ಗಮನ ಸೆಳೆದಿದ್ದ ಬಾಲಕ: 2016ರಲ್ಲಿ ಹಾರಾಡಿ ಸರ್ಕಾರಿ ಶಾಲೆಯ ಐವರು ಶಿಕ್ಷಕಿಯರ ವರ್ಗಾವಣೆ ಸಂದರ್ಭ ವಿದ್ಯಾರ್ಥಿ ದಿವಿತ್​ ರೈ ನಡೆಸಿದ್ದ ಪ್ರತಿಭಟನೆ ಅಂದಿನ ಗೃಹಸಚಿವ ಡಾ.ಜಿ.ಪರಮೇಶ್ವರ್​ ಅವರ ಗಮನ ಸೆಳೆದಿತ್ತು. ವಿದ್ಯಾರ್ಥಿಯ ಒತ್ತಾಸೆಯಂತೆ ಗೃಹಸಚಿವರು ಶಾಲೆಗೂ ಭೇಟಿ ನೀಡಿದ್ದರು. ಸ್ಕೌಟ್ಸ್​-ಗೈಡ್ಸ್​ ಜಾಂಬೂರಿಗಾಗಿ ಜಪಾನ್​ಗೆ ತೆರಳುವ ಸಂದರ್ಭ ದಿವಿತ್​ ರೈ ಅವರ ಖರ್ಚನ್ನು ಭರಿಸಿದ್ದ ಪರಮೇಶ್ವರ್​, ಪ್ರಸಕ್ತ ಇಂಜಿನಿಯರಿಂಗ್​ ವಿದ್ಯಾಭ್ಯಾಸದ ವೆಚ್ಚವನ್ನೂ ಪಾವತಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net