

ಉಡುಪಿ: ಬದುಕಿನಲ್ಲಿ ನೋವುಂಡ ಜೀವಕ್ಕೆ ಇದೀಗ ಸಂತಸದ ಕ್ಷಣ... ಮನೆ ಮಗಳಂತೆ 4 ವರ್ಷದಿಂದ ಜೊತೆಗಿದ್ದ ಯುವತಿಯನ್ನ ಧಾರೆಯೆರೆದು ಗಂಡನ ಮನೆಗೆ ಕಳುಹಿಸುವ ಕಾತರ... ಸರ್ಕಾರದ ಆಶ್ರಯದಲ್ಲೇ ಜೀವನ ಕಟ್ಟಿಕೊಂಡ ಹಲವರು ಈಕೆಯ ಸಂಭ್ರಮ ನೋಡಿ ತಮ್ಮ ನೋವನ್ನೂ ಮರೆಯಲು ಪ್ರಯತ್ನಿಸುತ್ತಿದ್ದರು... ತಮಗೂ ಬದುಕಿನ ಆಶಾಕಿರಣ ಸಿಗಲಿದೆ ಎಂದು ಮನದಲ್ಲೇ ಅಂದುಕೊಳ್ಳುತ್ತಿದ್ದರು... ಅಲ್ಲಿ ನೆರೆದಿದ್ದ ಮಹಿಳೆಯರ ಕಣ್ಣಾಲಿಗಳು ತುಂಬಿಕೊಂಡಿದ್ದವು... ಅಲ್ಲಿದ್ದ ಯುವತಿಯರು ಗೆಳತಿಯ ಮದ್ವೆ ಸಡಗರದಲ್ಲಿ ಮುಳುಗಿದ್ದರು... ಉಡುಪಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಶಾಸಕರೇ ಮುಂದೆ ನಿಂತು ಮದ್ವೆ ಕಾರ್ಯ ನಡೆಸಿಕೊಡುತ್ತಿದ್ದರು...
ಇದು ಶುಕ್ರವಾರ ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ಕಂಡು ಬಂದ ದೃಶ್ಯ. ಈ ನಿಲಯ 10 ವರ್ಷದ ಬಳಿಕ ಮದುವೆ ಮನೆಯಾಗಿ ಪರಿವರ್ತನೆಗೊಂಡಿತ್ತು. 4 ವರ್ಷದ ಹಿಂದೆ ಕುಟುಂಬದಿಂದ ಪರಿತ್ಯಕ್ತಳಾಗಿ ಮಹಿಳಾ ನಿಲಯ ಸೇರಿದ ಜಯಶ್ರೀ (25) ಎಂಬುವವರು ದಾವಣಗೆರೆಯ ಮಲ್ಲೇಶ ಡಿ.ಎಲ್. (29) ಎಂಬುವರ ಕೈಹಿಡಿದರು. ಸ್ವತಃ ಉಡುಪಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಶಾಸ್ತ್ರೋಕ್ತವಾಗಿ ವಿವಾಹ ನಡೆಸಿಕೊಟ್ಟರು. ಮದುವೆಯಲ್ಲಿ ಶಾಸಕ ರಘುಪತಿ ಭಟ್ ಅಣ್ಣನ ಜವಾಬ್ದಾರಿ ಪೂರೈಸಿ ಲಾಜ ಹೋಮದಲ್ಲಿ ಭಾಗಿಯಾದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ವೀಣಾ ವಿವೇಕಾನಂದ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಕುಂದರ್ ಮದುಮಗಳನ್ನು ಧಾರೆಯೆರೆದುಕೊಟ್ಟರು. ಮೂಡುಬೆಳ್ಳೆ ಗಣೇಶ್ ಭಟ್, ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಕಾನೂನು ಸೇವಾ ಪ್ರಧಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಮಹಿಳಾ ನಿಲಯ ಅಧೀಕ್ಷಕಿ ಲೀಲಾವತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾ ರಾವ್, ಇದೊಂದು ವಿಶಿಷ್ಟ ವಿವಾಹ. ಅನಾಥ ಹುಡುಗಿ ಬಾಳಿಗೆ ಬೆಳಕು ನೀಡುವ ಮಾದರಿ ಕೆಲಸ. ಸುಮಾರು 6 ತಿಂಗಳ ಹಿಂದೆ ವಿವಾಹ ಪ್ರಸ್ತಾಪ ಬಂದಿತ್ತು. ನಂತರ ಹುಡುಗ ಹಾಗೂ ಆತನ ಕುಟುಂಬದ ಬಗ್ಗೆ ದಾವಣಗೆರೆ ಜಿಲ್ಲಾ ಪರಿವೀಕ್ಷಣಾಧಿಕಾರಿಗಳಿಂದ ವರದಿ ತರಿಸಿಕೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಅನುಮೋದನೆಗೊಂಡ ಬಳಿಕ ಮದುವೆಗೆ ಸಿದ್ಧತೆ ಮಾಡಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ವೀಣಾ ವಿವೇಕಾನಂದ ಮಾತನಾಡಿ, ಯುವಕ ಮತ್ತು ಯುವತಿ ಒಪ್ಪಿಕೊಂಡ ಬಳಿಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಗುರುವಾರ ವಿವಾಹ ನೋಂದಣಿ ಮಾಡಲಾಗಿದೆ. ಹುಡುಗಿ ಖಾತೆಯಲ್ಲಿ ಸರ್ಕಾರದಿಂದ 15 ಸಾವಿರ ರೂ. ಹಾಗೂ ದಾನಿಗಳು ನೀಡಿದ 50 ಸಾವಿರ ರೂ. ಮೊತ್ತವನ್ನು ನಿಖರ ಠೇವಣಿ ಇಡಲಾಗಿದ್ದು, 3 ವರ್ಷದ ಬಳಿಕ ಈ ಹಣವನ್ನು ಮಧು ಬಳಸಿಕೊಳ್ಳಬಹುದು. ಮಹಿಳಾ ನಿಲಯದಲ್ಲಿ ಈವರೆಗೆ 22 ಮದುವೆಗಳು ನಡೆದಿವೆ. ಮದುವೆ ಬಳಿಕವೂ ಯುವತಿ 3 ವರ್ಷ ಮಹಿಳಾ ನಿಲಯದ ಪರಿವೀಕ್ಷಣೆಗೆ ಒಳಪಡಲಿದ್ದಾಳೆ ಎಂದು ಮಾಹಿತಿ ನೀಡಿದರು.
ನನಗೆ ಇಬ್ಬರು ಗಂಡು ಮಕ್ಕಳು ಹಾಗೂ ಪುತ್ರಿ ಇದ್ದಾಳೆ. ಮಗಳಿಗೆ ಹಾಗೂ ಮೊದಲ ಮಗನಿಗೆ ಮದುವೆಯಾಗಿ ಬೆಂಗಳೂರಿನಲ್ಲಿದ್ದಾರೆ. ವರ 2ನೇ ಮಗ. ನನ್ನೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾನೆ. ಸ್ವಂತ ಆಸಕ್ತಿಯಿಂದ ಉಡುಪಿಗೆ ಬಂದು ವಿಚಾರಿಸಿದ್ದೆವು. ಬಳಿಕ ಯುವತಿಯೊಂದಿಗೆ ಮಾತನಾಡಿ ಆಕೆಯೂ ಒಪ್ಪಿಗೆ ಸೂಚಿಸಿದ್ದಾಳೆ. ನಮಗೂ ಒಪ್ಪಿಗೆಯಾಗಿದೆ. ನಮ್ಮ ಮನೆಗೆ ಜಿಲ್ಲಾಧಿಕಾರಿ, ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಭಾನುವಾರ ದಾವಣಗೆರೆಯಲ್ಲಿ ರಿಸೆಪ್ಶನ್ ಇಟ್ಟುಕೊಂಡಿದ್ದೇವೆ ಎಂದು ವರನ ತಂದೆ ಲೋಕಪ್ಪ ಡಿ.ಎಚ್. ತಿಳಿಸಿದರು.