

ಬೆಂಗಳೂರು: ರಾಜ್ಯದ 19 ಜಿಲ್ಲಾ ಆಸ್ಪತ್ರೆ ಹಾಗೂ 147 ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾದ ತೀವ್ರ ನಿಗಾ ಘಟಕಕ್ಕೆ ತಜ್ಞ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಅನುಮತಿ ನೀಡಿ ಅದೇಶ ಹೊರಡಿಸಿದೆ. 19 ಜಿಲ್ಲಾ ಆಸ್ಪತ್ರೆಗೆ ಇಬ್ಬರಂತೆ 38 ತಜ್ಞ ವೈದ್ಯರನ್ನು (ಫಿಜೀಷಿಯನ್/ಅರಿವಳಿಕೆ ತಜ್ಞ) ಹಾಗೂ 147 ತಾಲೂಕು ಆಸ್ಪತ್ರೆಗೆ ಒಬ್ಬರಂತೆ 147 ತಜ್ಞ ವೈದ್ಯರು ಸೇರಿ 185 ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಎಸ್. ಪ್ರದೀಪ್ ಕುಮಾರ್ ತಿಳಿಸಿದ್ದಾರೆ. ಪ್ರತಿ ಜಿಲ್ಲಾ ಆಸ್ಪತ್ರೆಗೆ 40 ಹಾಸಿಗೆಗಳ ತೀವ್ರ ನಿಗಾ ಘಟಕ ಹಾಗೂ ಅದರ ನಿರ್ವಹಣೆಗಾಗಿ ಇಬ್ಬರು ತಜ್ಞ ವೈದ್ಯರು, 6 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, 6 ಶುಶ್ರೂಷಕರು ಹಾಗೂ ಮೂವರು ಡಿ-ಗ್ರೂಪ್ ನೌಕರರು ಸೇರಿ 17 ಮಂದಿಯ ಅಗತ್ಯವಿದೆ. ಪ್ರತಿ ತಾಲೂಕು ಆಸ್ಪತ್ರೆಗೆ 20 ಹಾಸಿಗೆಗಳ ತೀವ್ರ ನಿಗಾ ಘಟಕ ಹಾಗೂ ಒಬ್ಬರು ತಜ್ಞ ವೈದ್ಯರು, ನಾಲ್ವರು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ನಾಲ್ವರು ಶುಶ್ರೂಷಕರು ಹಾಗೂ ಮೂವರು ಡಿ-ಗ್ರೂಪ್ ನೌಕರರು ಸೇರಿ 12 ಮಂದಿಯ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.