

ತುಮಕೂರು: ಪೊಲೀಸ್ ಇಲಾಖೆಯಲ್ಲಿರುವಂತೆ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ‘ವಿಸಿಟರ್ಸ್ ಬುಕ್’ ಕಡ್ಡಾಯಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕೆಡಿಪಿ ಸಭೆಯ ಕೊನೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರ್ತವ್ಯದ ನೀತಿಪಾಠ ಮಾಡಿದ ಅವರು, ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕುಗಳಿಗೆ ಹೋಗಿ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ವಿಸಿಟರ್ಸ್ ಬುಕ್ನಲ್ಲಿ ಸಹಿ ಮಾಡಿ ಬರಲಿ ಎಂದು ಸೂಚಿಸಿದರು.
ಸರ್ಕಾರದ ಗ್ಯಾರಂಟಿಗಳ ಅನುಷ್ಟಾನದಲ್ಲಿ ಸಿಎಂ ಆಯಾ ಜಿಲ್ಲಾಧಿಕಾರಿ, ಸಿಇಒ ಅವರನ್ನೇ ಹೊಣೆ ಮಾಡುತ್ತಾರೆ, ಹೊಸ ಸರ್ಕಾರದ ಆಶಯದಂತೆ ಎಲ್ಲರೂ ಕೆಲಸ ಮಾಡಬೇಕು, ಅಧಿಕಾರಿಗಳು ಕಚೇರಿ ಬಿಟ್ಟು ಹಳ್ಳಿಗಳಿಗೂ ಹೋಗಬೇಕು ಎಂದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆಯಾ ಕೇಂದ್ರ ಸ್ಥಾನದಲ್ಲಿಯೇ ವಾಸವಾಗಿರಬೇಕು. ಈ ಬಗ್ಗೆ ಡಿಸಿ ಹಾಗೂ ಸಿಇಒ ಅಗತ್ಯ ಮಾಹಿತಿ ಪಡೆದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು. ಕೆಲವು ಇಲಾಖೆಗಳು ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹೊಸ ಸರ್ಕಾರ ಬಂದಿದ್ದು ಜನರಿಗೆ ಬದಲಾವಣೆಯನ್ನು ತೋರಿಸಬೇಕು. ಕೆಲಸ ಮಾಡಲು ಸಾಧ್ಯವಾಗದವರು ತಮ್ಮ ದಾರಿ ನೋಡಿಕೊಳ್ಳಬೇಕು, ಜಿಲ್ಲೆಯ ಅಭಿವೃದ್ಧಿ ನಮ್ಮ ಜವಾಬ್ಧಾರಿಯಾಗಿದೆ ಎಂದು ತಾಕೀತು ಮಾಡಿದರು.