ಸರ್ಕಾರದ ಯೋಜನೆಗಳ ಸಕಾಲಕ್ಕೆ ಅನುಷ್ಠಾನಗೊಳಿಸಿ: ಗೃಹ ಸಚಿವ ಪರಂ

TPR_Param
Published on

ತಿಪಟೂರು: ಸರ್ಕಾರದ ಎಲ್ಲಾ ಯೋಜನೆಗಳನ್ನು ಅಧಿಕಾರಿಗಳು ಸಕಾಲಕ್ಕೆ ಅನುಷ್ಠಾನ ಮಾಡಿ ಎಲ್ಲಾ ವರ್ಗದ ಅರ್ಹ ಫಲಾನುಭವಿಗಳಿಗೆ ದೊರೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ ತಾಕೀತು ಮಾಡಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಚುನಾವಣೆಗೆ ಮುನ್ನ ನಮ್ಮ ಪಕ್ಷ 5ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಅವುಗಳನ್ನು ಹಂತ ಹಂತವಾಗಿ ಅನುಷ್ಟಾನ ಮಾಡಲಾಗಿರುವ ಕಾರ್ಯಕ್ರಮಗಳನ್ನು ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ತಲುಪ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಜನರು ಬದಲಾವಣೆ ಬಯಸಿ ನಮ್ಮ ಪಕ್ಷಕ್ಕೆ ಬಹುಮತ ನೀಡಿ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಇಲ್ಲವಾದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಎತ್ತಿನಹೊಳೆ ಯೋಜನೆ: ತಾಲೂಕಿನಲ್ಲಿ 43 ಕಿ.ಮೀ., ಉದ್ದ ಎತ್ತಿನಹೊಳೆ ಯೋಜನೆ ಕಾಮಗಾರಿ ಹಾದು ಹೋಗುತ್ತದೆ. ಈ ಯೋಜನೆಗೆ 374ಕೋಟಿ ಹಣ ಮೀಸಲಿಡಲಾಗಿದೆ. 43 ಕಿ.ಮೀ., ಪೈಕಿ 16ಕಿ.ಮೀ., ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ 27 ಕಿ. ಮೀ. ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಎಂದು ಪರಮೇಶ್ವರ ಸೂಚಿಸಿದರು.

ಜೆಜೆಎಂ ಯೋಜನೆಯಡಿ ಮನೆ ಮನೆಗೆ ನಳದ ಮೂಲಕ ಕುಡಿಯುವ ನೀರನ್ನು ನೀಡುವ ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ಅದರಲ್ಲಿ ಕೆಲವು ಗುಣಮಟ್ಟವಾಗಿ ಕಾಮಗಾರಿಗಳು ನಿರ್ಮಾಣವಾಗಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿಗಳು ನಡೆಯದಂತೆ ಕ್ರಮ ವಹಿಸಲು ಸೂಚಿಸಿದರು.

ನಗರದ ಹೇಮಾವತಿ ನಾಲಾ ಇಲಾಖೆಯ ವ್ಯಾಪ್ತಿಯಲ್ಲಿರುವ 4ಎಕರೆ ಜಾಗವನ್ನು, ಅದರಲ್ಲಿ ಎರಡು ಎಕರೆ ಭೂಮಿಯನ್ನು ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆ ನಿರ್ಮಾಣ ಮಾಡಲು ನೀಡುವಂತೆ ಇಲಾಖೆಯ ಅಧಿಕಾರಿಗೆ ಒಂದು ಮನವಿಯನ್ನು ಸಲ್ಲಿಸಿ ಎಂದರು.

ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ, ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಅಪಾರ ಜಿಲ್ಲಾಧಿಕಾರಿ ಶಿವನಾಂದ ಬಿ ಕರಾಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net