ಆ.15ರೊಳಗೆ ಶೇ.100ರಷ್ಟು ಗೃಹಜ್ಯೋತಿ ನೋಂದಣಿ ಆಗಬೇಕು -ಪರಂ ಖಡಕ್ ಸೂಚನೆ

Gruha_Jyothi
Published on

ತುಮಕೂರು: ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಈವರೆಗೆ ಶೇ.70ರಷ್ಟು ನೋಂದಣಿಯಾಗಿದ್ದು, ಆ.15ರೊಳಗೆ ಶೇ.100ರಷ್ಟು ನೋಂದಣಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಯಾವುದೇ ಸಬೂಬು ಹೇಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ, ಗೃಹ ಸಚಿವ ಡಾ.ಜಿ.ಪರಮೇಶ್ವರ ಖಡಕ್ ಎಚ್ಚರಿಕೆ ನೀಡಿದರು.

ನಗರದ ಎಂಪ್ರೆಸ್ ಕಾಲೇಜು ಸಭಾಭವನದಲ್ಲಿ ಶನಿವಾರ ಉಚಿತ ಬೆಳಕು ಸುಸ್ಥಿರ ಬದುಕು ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 7,82,542 ಗೃಹ ಬಳಕೆ ಗ್ರಾಹಕರ ಪೈಕಿ 5,54,333 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದವರು ನೋಂದಣಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಸುಳ್ಳಭರವಸೆ ನೀಡಿಲ್ಲ: ಈ ನಾಡಿನಲ್ಲಿ ಬಹಳ ಜನ ಬಡವರಿದ್ದಾರೆ. ಕಡಿಮೆ ದುಡಿಮೆಯ ಜನರಿದ್ದಾರೆ. ಕೃಷಿಕರಿದ್ದಾರೆ, ನಿರ್ಲಕ್ಷಿತ ಸಮುದಾಯದವರಿದ್ದಾರೆ. ಈ ಎಲ್ಲಾ ಸಮುದಾಯದವರನ್ನು ಸಮಾನತೆಯಿಂದ ಕಾಣಬೇಕು. ಪ್ರತಿಯೊಬ್ಬ ನಾಗರಿಕ ಸಮಾನತೆಯಿಂದ ಬದುಕುವ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಆಶಯದಂತೆ ಕಾರ್ಯಕ್ರಮಗಳನ್ನು ರೂಪಿಸಿ, 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ನಮ್ಮ ಸರ್ಕಾರ ಸುಳ್ಳು ಭರವಸೆ ನೀಡಿಲ್ಲ. ಎಲ್ಲಾ ಗ್ಯಾರಂಟಿಯ ಜಾರಿಯ ಹಿಂದೆ ಕೆಳವರ್ಗದ ಸಮುದಾಯದ ಅಭಿವೃದ್ಧಿ ಉದ್ದೇಶ ಇದೆ ಎಂದು ಜಿ.ಪರಮೇಶ್ವರ ಹೇಳಿದರು.

ಈ ಸಂದರ್ಭ ಸಾಂಕೇತಿಕವಾಗಿ ಫರಿದಾ ಖಾನಂ, ಸಿದ್ದಗಂಗಮ್ಮ, ಸುಮಿತ್ರ, ಶೃತಿ, ರಾಜೇಶ್ವರಿ ಎಂಬುವವರಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸಲಾಯಿತು.

ಚಿತ್ರದುರ್ಗ ವಲಯ ಬೆವಿಕಂ ಮುಖ್ಯ ಇಂಜಿನಿಯರ್ ಗೋವಿಂದಪ್ಪ ಸ್ವಾಗತಿಸಿದರು. ಅಧೀಕ್ಷಕ ಇಂಜಿನಿಯರ್ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಪಾಲಿಕೆ ಮೇಯರ್ ಎಂ.ಪ್ರಭಾವತಿ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಪಂ ಸಿಇಒ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಪಾಲಿಕೆ ಆಯುಕ್ತೆ ಅಶ್ವಿಜಾ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಪ್ರಸಕ್ತ ಸಾಲಿನ 8 ತಿಂಗಳಿಗೆ ಅನುಷ್ಠಾನಗೊಳಿಸಲು 36 ಸಾವಿರ ಕೋಟಿ ರೂ.,ಗಳ ಅಗತ್ಯವಿದ್ದು, ಮುಖ್ಯಮಂತ್ರಿಗಳು ಈ ಸಾಲಿನ ಬಜೆಟ್‌ನಲ್ಲಿ ಹೊಂದಿಸಿದ್ದಾರೆ. ಮುಂದಿನ ಸಾಲಿಗೆ 52 ಸಾವಿರ ಕೋಟಿ ರೂ., ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿದ್ದು, ಅದನ್ನು ಸಹ ಮುಂದಿನ ಬಜೆಟ್‌ನಲ್ಲಿ ಹೊಂದಿಸಲಾಗುವುದು. ಡಾ.ಜಿ.ಪರಮೇಶ್ವರ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net