ಸಕಾಲ ಅನುಷ್ಠಾನದಲ್ಲಿ ಹಿಂದೆ ಬಿದ್ದ ಜಿಲ್ಲೆ

Published on

ಕಳೆದ 15 ತಿಂಗಳಲ್ಲಿ ಸಾಧನೆಯಲ್ಲಿ ಏರಿಳಿತ

ಚಿಕ್ಕಬಳ್ಳಾಪುರ : ಸಕಾಲ ಯೋಜನೆ ಅನುಷ್ಠಾನದಲ್ಲಿ ಹಿಂದೆ ರಾಜ್ಯದಲ್ಲಿ ಉತ್ತಮ ಸಾಧನೆಯ ಮೂಲಕ ಜಿಲ್ಲಾವಾರು ಪ್ರಥಮ ಸ್ಥಾನದಲ್ಲಿರುತ್ತಿದ್ದ ಚಿಕ್ಕಬಳ್ಳಾಪುರ, ರ‌್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದೆ.
ಕಳೆದ ಆಗಸ್ಟ್‌ನಲ್ಲಿ ಸ್ವೀಕರಿಸಿದ 58,381 ಅರ್ಜಿಗಳ ಪೈಕಿ 57,212 ಅರ್ಜಿಗಳನ್ನು ಇತ್ಯರ್ಥಪಡಿಸುವುದರೊಂದಿಗೆ 7ನೇ ಸ್ಥಾನಕ್ಕೆ ಕುಸಿದಿದೆ. ಕಳೆದ 15 ತಿಂಗಳಲ್ಲಿ ಜಿಲ್ಲಾವಾರು ತೃಪ್ತಿದಾಯಕವಲ್ಲದ ಏರುಪೇರಿನ ಸಾಧನೆ ಹೊಂದಿದೆ. ಹಿಂದೆ ರಾಜ್ಯದಲ್ಲಿ ಮೊದಲು ಇಲ್ಲವೇ ಎರಡನೇ ಸ್ಥಾನದಲ್ಲಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು.
ಜಿಲ್ಲೆಯಲ್ಲಿ ಸಕಾಲ ಯೋಜನೆಯಡಿ ಕಳೆದ 15 ತಿಂಗಳಲ್ಲಿ (2023ನೇ ಜೂನ್‌ನಿಂದ 2024ನೇ ಆಗಸ್ಟ್) 8,76,679 ಅರ್ಜಿಗಳನ್ನು ಸ್ವೀಕರಿಸಿದ್ದು 8,68,784 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಅವಧಿಯಲ್ಲಿ ಕನಿಷ್ಠ ಸಾಧನೆ 20ನೇ, ಗರಿಷ್ಠ 4ನೇ ಸ್ಥಾನದ ಸಾಧನೆ ತೋರಲಾಗಿದೆ.


ಜಿಲ್ಲಾವಾರು ಸಾಧನೆ
ಪ್ರಸಕ್ತ ಸಾಲಿನ ಆಗಸ್ಟ್‌ನಲ್ಲಿ ಅರ್ಜಿಗಳ ಸ್ವೀಕಾರ, ಇತ್ಯರ್ಥ, ಪ್ರಕ್ರಿಯೆಯ ಅವಧಿ, ಬಾಕಿ ಸೇರಿ ವಿವಿಧ ಅಂಶಗಳನ್ನಾಧಾರಿಸಿ ರಾಜ್ಯದಲ್ಲಿ ಜಿಲ್ಲಾವಾರು ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ.78.91), ಯಾದಗಿರಿ (ಶೇ.78.66) ದ್ವಿತೀಯ, ಕಲಬುರಗಿ (ಶೇ.78.63) ತೃತೀಯ ಸ್ಥಾನ ಪಡೆದಿದ್ದು, ಚಿಕ್ಕಬಳ್ಳಾಪುರ (ಶೇ.78.06) 7ನೇ ಸ್ಥಾನದಲ್ಲಿದೆ.


ಪ್ರಶಸ್ತಿ, ಉತ್ತಮ ಸಾಧನೆ
ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಆರ್.ಲತಾ, ದೀಪ್ತಿ ಆದಿತ್ಯ ಕಾನಡೆ, ಅನಿರುದ್ಧ ಶ್ರವಣ್ ಅವಧಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ ಸತತವಾಗಿ ಮೊದಲ ಸ್ಥಾನ ಗಳಿಸಿದ್ದು, ತಿಂಗಳುವಾರು ಉತ್ತಮ ಸಾಧನೆಯೊಂದಿಗೆ ರಾಜ್ಯ ಸರ್ಕಾರದಿಂದ 3 ಮೂರು ಬಾರಿ ಪ್ರಶಸ್ತಿ ಪಡೆದುಕೊಂಡಿತ್ತು. ಅಂದಿನ ಸಚಿವ ಸುರೇಶ್ ಕುಮಾರ್ ಜಿಲ್ಲೆಯ ಸಕಾಲ ಯೋಜನೆಯ ಅನುಷ್ಠಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನಾ ಪತ್ರ ನೀಡಿದ್ದರು.


ಅಧಿಕಾರಿಗಳ ಅಸಡ್ಡೆ
ಈ ಹಿಂದೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಕಾಲ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ನಿಯಮಾನುಸಾರ ಇತ್ಯರ್ಥಪಡಿಸಿ, ಹಿಂಬರಹ ನೀಡುತ್ತಿದ್ದರು. ಆದರೆ, ಈಗ ಕೆಲ ಇಲಾಖೆಗಳು ಅರ್ಜಿಗಳ ಇತ್ಯರ್ಥದ ಸ್ಥಿತಿಗತಿಗಳ ಮಾಹಿತಿ ದಾಖಲಿಸುವಲ್ಲಿ ವಿಳಂಬ ಧೋರಣೆ ಪ್ರದರ್ಶಿಸುತ್ತಿವೆ. ಕೆಲವರ ಅಸಡ್ಡೆ ಧೋರಣೆಗೆ ಕಡಿಮೆ ಡಿಜಿಟಲ್ ಅಂಕಿ-ಅಂಶದ ವ್ಯತ್ಯಾಸದಲ್ಲಿ ಜಿಲ್ಲೆಯು ಹಿಂದುಳಿಯುವಂತಾಗಿದೆ. ಬೇರೆ ಜಿಲ್ಲೆಗಳು ಒಳ್ಳೆಯ ರ‌್ಯಾಂಕಿಂಗ್ ಗಳಿಕೆಗೆ ಪ್ರತಿ ಅರ್ಜಿಗೂ ಆದ್ಯತೆ ನೀಡುತ್ತಿವೆ.


ಪಾರದರ್ಶಕ, ಪ್ರಾಮಾಣಿಕ ಸೇವೆ
ಇಂದು, ನಾಳೆ, ಇನ್ನಿಲ್ಲ, ಹೇಳಿದ ದಿನ ತಪ್ಪೊಲ್ಲ ಎಂಬ ೋಷಣೆಯೊಂದಿಗೆ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಆಡಳಿತಾತ್ಮಕ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಯೋಜನೆಯನ್ನು ಜಾರಿಗೆ ತಂದಿತು. ಇದರಡಿ ಸಲ್ಲಿಕೆಯಾದ ಅರ್ಜಿಯನ್ನು ನಿಗದಿತ ಅವಧಿಯಲ್ಲಿ ನಿಯಮಾನುಸಾರ ಇತ್ಯರ್ಥಪಡಿಸುವ ಗುರಿಯನ್ನು ಹೊಂದಲಾಗಿದೆ. ಈ ಮೂಲಕ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಜತೆಗೆ ಆನ್‌ಲೈನ್ ನೋಂದಣಿ ಮೂಲಕ ತ್ವರಿತವಾಗಿ ಪಾರದರ್ಶಕ, ಪ್ರಾಮಾಣಿಕ ಸೇವೆ ಒದಗಿಸಲಾಗುತ್ತದೆ.

ಮೊದಲಿನಿಂದಲೂ ಜಿಲ್ಲೆಯು ಸಕಾಲ ಯೋಜನೆಯಡಿ ಉತ್ತಮ ಸಾಧನೆ ತೋರುತ್ತಿದೆ. ಇತ್ತೀಚೆಗೆ ಕೆಲ ಇಲಾಖೆಗಳು ಮಾತ್ರ ಅರ್ಜಿಗಳ ಇತ್ಯರ್ಥದಲ್ಲಿ ವಿಳಂಬ ಧೋರಣೆ ತೋರುತ್ತಿರುವುದರಿಂದ ಹಿನ್ನಡೆ ಕಂಡು ಬಂದಿದೆ.- ಹೆಸರು ಹೇಳಲು ಇಚ್ಛಿಸದ ಅಧಿಕಾರಿ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net