

ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಗುಡ್ಡ ಕುಸಿತ, ಮನೆ, ರಸ್ತೆ, ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು, ಜಿಲ್ಲಾಡಳಿತ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆಯೇ ಸಭೆ ನಡೆಸಿ, ಮಳೆಗಾಲದಲ್ಲಿ ಯಾವುದೇ ಸಮಸ್ಯೆಯಾಗದಂತೆ ಜಾಗೃತೆ ವಹಿಸಲು ತಿಳಿಸಿದ್ದೆ. ಉಡುಪಿ ಜಿಲ್ಲೆಗೆ ನನ್ನ ಅವಶ್ಯಕತೆ ಇದ್ದಾಗ ಖಂಡಿತ ಭೇಟಿ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಉಡುಪಿಗೆ ಭಾನುವಾರ ಆಗಮಿಸಿದ್ದ ಅವರು, ಗುಜ್ಜರಬೆಟ್ಟು ಕಡಲ್ಕೊರೆತ ಪ್ರದೇಶ, ಬೈಂದೂರು ತಾಲೂಕಿನ ಸೋಮೇಶ್ವರದಲ್ಲಿ ಗುಡ್ಡ ಕುಸಿತ, ಬಿಜೂರು, ಶಿರೂರು ಗ್ರಾಮದಲ್ಲಿ ಹಾನಿಗೊಂಡ ಮನೆ, ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿಯುವ ಹಂತದಲ್ಲಿರುವ ಸ್ಥಳ, ಕೋಟ, ಪಡುಬಿದ್ರಿಗೆ ತೆರಳಿ ಮಳೆಯಿಂದ ಆದ ಹಾನಿ ವೀಕ್ಷಿಸಿ ಮಾಧ್ಯಮದ ಜತೆ ಮಾತನಾಡಿದರು.
ಜಿಲ್ಲೆಯಲ್ಲಿ ನೆರೆ ಬಂದು ಜನರು ಕಷ್ಟ ಅನುಭವಿಸುತ್ತಿದ್ದರೂ ಉಸ್ತುವಾರಿ ಸಚಿವರು ಬರುತ್ತಿಲ್ಲ ಎಂಬ ಅಸಮಾಧಾನ ಕಂಡುಬರುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಉಡುಪಿಯಲ್ಲೇ ಮನೆ ವಾಡಿ ಇರಲು ನಾನು ತಯಾರಿದ್ದೇನೆ. ಆದರೆ, ರಾಜ್ಯದ ಸಚಿವೆಯಾಗಿ ನನಗೆ ಬಹಳಷ್ಟು ಜವಾಬ್ದಾರಿ ಇದೆ, ಅಧಿವೇಶನ ನಡೆಯುತ್ತಿದೆ. ಇಂದು ಭಾನುವಾರ ರಜೆ ಇದ್ದರೂ ಜನರಿಗೆ ಸಾಂತ್ವನ ಹೇಳಲು ಬಂದಿದ್ದೇನೆ. 24*7 ಜಿಲ್ಲಾಡಳಿತ ಹಾಗೂ ಸರ್ಕಾರ ಎಚ್ಚರವಾಗಿದೆ. ಯಾವ ತೊಂದರೆ ಆಗದಂತೆ ಈಗಾಗಲೇ ಹಲವು ಕ್ರಮ ಕೈಗೊಂಡಿದ್ದೇವೆ ಎಂದರು.