ಬೆಂಗಳೂರು-ಕುಂದಾಪುರ ರೈಲಿಗೆ ಗ್ರೀನ್‌ಸಿಗ್ನಲ್ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿಗೆ ಸ್ಪಂದನೆ

kota sreenivas poojary
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಬೆಂಗಳೂರು - ಕುಂದಾಪುರ ನಡುವೆ ಭೂಕುಸಿತವಾಗಿದ್ದು, ರಸ್ತೆಗಳು ಬಂದ್ ಆಗಿರುವುದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಈ ಎರಡೂ ಪ್ರಮುಖ ಸ್ಥಳಗಳ ಮಧ್ಯೆ ಪ್ರಯಾಣಕ್ಕೆ ಅನುಕೂಲವಾಗಲು ಉಡುಪಿ, ಕುಂದಾಪುರವನ್ನು ಬೆಂಗಳೂರಿಗೆ ಸಂಪರ್ಕಿಸಲು ಪಡೀಲ್ ಬೈಪಾಸ್ ಮೂಲಕ ರಾತ್ರಿಯ ವಿಶೇಷ ರೈಲು ಸೇವೆ ಆರಂಭಿಸಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದು, ಇಲಾಖೆಯಿಂದ ಸ್ಪಂದನೆ ದೊರಕಿದೆ.

ಬೆಂಗಳೂರು-ಮಂಗಳೂರು ರೈಲಿಗೆ ಮಡಗಾಂವ್ ಮಂಗಳೂರು ಜಂಕ್ಷನ್ ಮಧ್ಯೆ ಮೂರು ದಿನಗಳ ವಿಶೇಷ ಲಿಂಕ್ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಗೋವಾದಿಂದ ಕುಂದಾಪುರ ಮಾರ್ಗವಾಗಿ ಸಂಪರ್ಕ ರೈಲು ಸೇವೆ ಆರಂಭಕ್ಕೆ ರೈಲ್ವೆ ಇಲಾಖೆ ಅಸ್ತು ಎಂದಿದೆ. ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಇಂಜಿನ್ ಬದಲಾವಣೆ, ನೀರು ತುಂಬುವಿಕೆಯಂಥ ಕಾರಣಗಳಿಂದ ಪ್ರತ್ಯೇಕ ಲಿಂಕ್ ರೈಲಿಗಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಬೆಂಗಳೂರು ಮಂಗಳೂರು ವಿಶೇಷ ರೈಲು ಬಂದ ಕೆಲವೇ ಹೊತ್ತಲ್ಲಿ ಲಿಂಕ್ ರೈಲು ಉಡುಪಿ ಕುಂದಾಪುರ ಮಾರ್ಗವಾಗಿ ಗೋವಾ ಕಡೆ ತೆರಳಲಿದೆ.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಸಮಸ್ಯೆಗಳ ಬಗ್ಗೆ ಸಂಸದರಿಗೆ ವಿವರಿಸಿದ್ದು, ತಕ್ಷಣ ಪ್ರತಿಕ್ರಿಯಿಸಿದ ಸಂಸದರು ರೈಲ್ವೆ ರಾಜ್ಯ ಖಾತೆ ಸಚಿವ ಸೋಮಣ್ಣ ಅವರೊಂದಿಗೆ ಲಿಂಕ್ ರೈಲು ಸೇವೆಗಳ ಆರಂಭಕ್ಕೆ ಮನವಿ ಮಾಡಿದ್ದಾರೆ. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಹೋರಾಟಕ್ಕೆ ಪ್ರಯಾಣಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net