ಬೇಲೂರು: ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಮಾಜಿ ಸಚಿವ ಬಿ.ಶಿವರಾಂ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದನ್ನು ಖಂಡಿಸುತ್ತೇವೆ ಎಂದು ಪುರಸಭೆ ಸದಸ್ಯ ಶಾಂತಕುಮಾರ್ ಹೇಳಿದರು.
ಮಾಜಿ ಸಚಿವ ಶಿವರಾಂ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಅರಸೀಕೆರೆ ಶಶಿಧರ್‌ಗೆ ಮಾತು ಕೊಟ್ಟಂತೆ ನಿಗಮ, ಮಂಡಳಿಯಲ್ಲಿ ಅವಕಾಶ ಕೊಡಬೇಕು. ಶಾಸಕ ಕೆ.ಎಂ.ಶಿವಲಿಂಗೇಗೌಡರನ್ನು ಲೋಕಸಭಾ ಚುನಾವಣೆ ಅಭ್ಯರ್ಥಿ ಮಾಡಬೇಕೆಂದು ಹೇಳಿದ್ದರು. ಇದರಲ್ಲಿ ತಪ್ಪೇನಿದೆ. ಚುನಾವಣೆಗೆ ಉಸ್ತುವಾರಿಯಾಗಿ ಒಬ್ಬರನ್ನು ನೇಮಿಸಿದ್ದಾರೆ. ಅವರು ಮತದಾರರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ತೆಗೆದುಕೊಳ್ಳಬೇಕು. ಎಲ್ಲೋ ಕುಳಿತು ಮಾಹಿತಿ ಪಡೆಯುವುದು ಸರಿಯಲ್ಲ ಎಂದಿದ್ದರು. ಜಿಲ್ಲಾ ಉಸ್ತುವಾರಿ ಮಂತ್ರಿಗಳ ವಿರುದ್ಧ ಏನೂ ಮಾತನಾಡಿಲ್ಲ. ಆದರೂ ಸಚಿವರು ಕಾರ್ಯಕ್ರಮವೊಂದರಲ್ಲಿ ಬಿ.ಶಿವರಾಂ ನನಗೆ ಲೆಕ್ಕಕಿಲ್ಲ. ಏನು ಬೇಕಾದರೂ ಮಾಡುತ್ತೇನೆ. ಯಾರೂ ಕೇಳೋ ಹಕ್ಕಿಲ್ಲ ಎಂದಿರುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಶಿವರಾಂ ಅವರ ಪಾತ್ರ ದೊಡ್ಡದಿದೆ. ಅವರು ಕಾರ್ಯಕರ್ತರೊಂದಿಗೆ ನಿರಂತರವಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರು ಕುಗ್ಗದೆ ಜಿಲ್ಲೆಯ ಎಲ್ಲ ಕ್ಷೇತ್ರಗಳ ಜನರೊಂದಿಗೆ ಕಷ್ಟ-ಸುಖಕ್ಕೆ ಭಾಗಿಯಾಗಿದ್ದಾರೆ. ಉಸ್ತುವಾರಿ ಸಚಿವರು ತಮ್ಮ ಮಾತನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಂಗನಾಥ್ ಮಾತನಾಡಿ, ಜನರೊಂದಿಗಿರುವ ಮಾಜಿ ಸಚಿವ ಬಿ.ಶಿವರಾಂರನ್ನು ಜಿಲ್ಲಾ ಉಸ್ತುವಾರಿ ಸಚಿವರು ಏಕವಚನದಲ್ಲಿ ಮಾತನಾಡಿರುವುದನ್ನು ಖಂಡಿಸುತ್ತೇನೆ. ಬೇಲೂರು ಪುರಸಭೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಅವರ ಪಾತ್ರ ಇದೆ. ಅಂತಹವರ ವಿರುದ್ಧ ಮಾತನಾಡಿದ್ದು ಸರಿಯಲ್ಲ ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಚಂದ್ರಶೇಖರ್(ಪಾಪು) ಮಾತನಾಡಿ, ಮಾಜಿ ಸಚಿವ ಬಿ.ಶಿವರಾಂ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ಅವರು ಶಿವಲಿಂಗೇಗೌಡ ಒಬ್ಬರೇ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವುದು. ಅವರೇ ಲೋಕಸಭಾ ಚುನಾವಣೆಗೆ ನಿಂತರೆ ಗೆಲುವು ಪಡೆಯಬಹುದು ಎಂದಿದ್ದಾರೆಯೇ ಹೊರತು ಯಾರನ್ನೂ ಬೈದಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ಮಾತು ಕೇಳಿ ಮನಸ್ಸಿಗೆ ಬಂದಂತೆ ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲ. ಸಚಿವರು ಕ್ಷಮೆ ಕೇಳಬೇಕು ಎಂದರು.
ಸನ್ಯಾಸಿಹಳ್ಳಿ ಗ್ರಾಪಂ ಅಧ್ಯಕ್ಷ ಶಿವೇಗೌಡ, ಪುರಸಭೆ ಸದಸ್ಯ ಭರತ್ ಇದ್ದರು.