

* ರೈತರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಅಂತಿಮ ಹಂತದಲ್ಲಿ ಸ್ಪಂದನೆ
* ಮಾವಿನ ಕೊಯ್ಲಿನ ಅವಧಿ ಪೂರ್ಣ
ಗಂಗಾಧರ್ ಬೈರಾಪಟ್ಟಣ ರಾಮನಗರ
ಬಹುತೇಕ ಪೂರ್ಣ ಪ್ರಮಾಣದಲ್ಲಿ ನಷ್ಟ ಅನುಭವಿಸಿರುವ ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಅಂತಿಮ ಹಂತದಲ್ಲಿ ಸ್ಪಂದಿಸಿದ್ದರೂ ಇದರ ಲಾಭ ಜಿಲ್ಲೆಯ ರೈತರಿಗೆ ಲಭಿಸುತ್ತಿಲ್ಲ.
ಕಳೆದ ಹಲವು ವರ್ಷಗಳಿಂದಲೂ ಹವಾಮಾನ ವೈಪರೀತ್ಯದಿಂದ ಮಾವು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಈ ಬಾರಿಯೂ ಶೇ.95 ಮಾವು ಇಳುವರಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬೆಳೆಗಾರರು ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಸ್ಪಂದಿಸಿದ್ದರೂ ಈಗಾಗಲೇ ಮಾವು ಪೂರ್ಣ ಮುಗಿಯುವ ಹಂತದಲ್ಲಿರುವ ಕಾರಣ ಜಿಲ್ಲೆಯ ರೈತರು ಇದರ ಲಾಭವನ್ನು ಪಡೆದುಕೊಳ್ಳುವುದಿಲ್ಲ.
ಪ್ರತಿ ಕೆಜಿ ಮಾವಿಗೆ ಅದರಲ್ಲೂ ತೋತಾಪುರಿ ಮಾವಿಗೆ 16 ರೂ. ಬೆಂಬಲ ಬೆಲೆಯನ್ನು ನಿಗದಿ ಮಾಡಲಾಗಿದ್ದು, ನಿಗದಿತ ಬೆಲೆಗಿಂತ ದರ ಕುಸಿತ ಕಂಡರೆ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50ರ ಅನುಪಾತದಲ್ಲಿ ರೈತರಿಗೆ ನಷ್ಟವನ್ನು ತುಂಬಿ ಕೊಡುವ ಕೆಲಸ ಮಾಡುತ್ತವೆೆ.
ಜಿಲ್ಲೆಯಲ್ಲಿ ಸುಮಾರು 70 ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಬಾದಾಮಿ, ಸೆಂಧೂರಾ, ತೋತಾಪುರಿ ಮತ್ತು ರಸ ಪೂರಿ ಮಾವಿನ ಹಣ್ಣುಗಳು ಬಹುತೇಕ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆ ಪ್ರವೇಶ ಮಾಡುತ್ತಿವೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 2.5 ಲಕ್ಷ ಟನ್ ಮಾವು ಉತ್ಪಾದನೆಯನ್ನು ಅಂದಾಜಿಸಲಾಗುತ್ತದೆಯಾದರೂ ಈ ಬಾರಿ ವಾತಾವರಣದ ಕಣ್ಣಾಮುಚ್ಚಾಲೆ ಆಟದಿಂದ ಎರಡು ಬಾರಿ ಲ ಬಿಟ್ಟಿರುವುದು ಹಾಗೂ ಜೋನಿ ಸೇರಿ ಇತರ ಕಾರಣಗಳಿಗೆ ತೀವ್ರ ಕಷ್ಟ ಉಂಟಾಗಿದೆ.
ಈ ಬಾರಿ ಲಭ್ಯ ಮಾಹಿತಿ ಪ್ರಕಾರ ರಾಮನಗರ ಚನ್ನಪಟ್ಟಣ ಮಾವು ಮಾರುಕಟ್ಟೆಗೆ ಕೇವಲ 150 ಟನ್ ವಿವಿಧ ತಳಿಯ ಮಾವು ಬಂದಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲಾಡಳಿತ ರಚಿಸಿದ್ದ ಸಮಿತಿ ಒಟ್ಟಾರೆ 74 ಸಾವಿರ ಟನ್ ಮಾವು ಉತ್ಪಾದನೆ ಆಗಿದೆ ಎನ್ನುವ ವರದಿಯನ್ನು ಸರ್ಕಾರಕ್ಕೆ ನೀಡಿದೆ. ವಿರ್ಪಯಾಸವೆಂದರೆ ಈಗಾಗಲೇ ಜಿಲ್ಲೆಯಲ್ಲಿ ಮಾವಿನ ಕೊಯ್ಲಿನ ಅವಧಿ ಮುಗಿದಿದೆ.
ರಾಮನಗರ ಮಾತ್ರವಲ್ಲದೇ ರಾಜ್ಯದ ಬಹುತೇಕ ಮಾವು ಬೆಳೆಯುವ ಜಿಲ್ಲೆಗಳ ರೈತರ ಪರಿಸ್ಥಿತಿಯೂ ಒಂದೇ ಆಗಿರುವ ಕಾರಣ ಸರ್ಕಾರ ಬೆಂಬಲ ಬೆಲೆ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದಲೂ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅಂದಾಜು ಪಟ್ಟಿಯನ್ನು ಮಾರುಕಟ್ಟೆಗೆ ಬಂದ ಆವಕದ ಮೇಲೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದೆ. ಜಿಲ್ಲೆಯಲ್ಲಿ ಈ ಬಾರಿ ಪ್ರತಿ ಹೆಕ್ಟೇರ್‌ಗೆ 2.68 ಟನ್ ಮಾವು ಬೆಳೆಯಲಾಗಿದೆ ಎನ್ನುವ ಅಂದಾಜು ಆಧಾರದ ಮೇಲೆ ಪ್ರತಿ ಹೆಕ್ಟೇರ್‌ಗೆ 22500 ರೂ. ಪರಿಹಾರವನ್ನು ಎನ್‌ಡಿ ಆರ್‌ಎಫ್, ಎಸ್‌ಡಿಆರ್ ಎಫ್
ಮಾನದಂಡದಂತೆ ಪರಿಹಾರ ನೀಡುವಂತೆ ಕೋರಲಾಗಿದೆ. ಆದರೆ, ರೈತರು ಪ್ರತಿ ಹೆಕ್ಟೇರ್‌ಗೆ 45 ಸಾವಿರ ರೂ. ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಇದೇ ವಾದವನ್ನು ಸರ್ಕಾರದ ಮುಂದೆಯೂ ಇಟ್ಟಿದ್ದಾರೆ. ಇದರ ನಡುವೆ ಕೇಂದ್ರ ಮಾವಿಗೆ ಬೆಂಬಲ ಬೆಲೆ ನೀಡಿದ್ದರೂ, ಇದರ ಪ್ರಯೋಜನ ಜಿಲ್ಲೆಯ ರೈತರಿಗೆ ಸಿಗದೇ ಇರುವ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಿಲ್ಲೆಯ ಮಾವು ಬೆಳೆಗಾರರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಮಾವಿನ ಕೊಯ್ಲು ಅವಧಿ ಮುಗಿದಿದೆ. ಇದರಿಂದ ಬೆಂಬಲ ಬೆಲೆ ಲಾಭ ನಮ್ಮ ಜಿಲ್ಲೆಯ ಮಾವು ಬೆಳೆಗಾರರಿಗೆ ಸಿಗುವುದಿಲ್ಲ. ಮುನೇಗೌಡ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ ರಾಮನಗರಮಾವಿನ ಬೆಂಬಲ ಬೆಲೆ ಘೋಷಣೆ ಮಾಡಿ ಸರ್ಕಾರ ಆದೇಶ ಮಾಡಿರುವುದು ಖುಷಿಯ ವಿಚಾರವಾದರೂ ಇದರ ಲಾಭ ನಮಗೆ ಇಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಆಗಿರುವ ನಷ್ಟವನ್ನು ತುಂಬಿಸಿಕೊಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡಲು ಶನಿವಾರ ರೈತರ ನಿಯೋಗ ಅವರನ್ನು ಭೇಟಿ ಮಾಡಲಿದೆ. ಧರಣೇಶ್ ರಾಂಪುರ, ಮಾವು ಮತ್ತು ತೋಟದ ಬೆಳೆಗಾರರ ಸಂಘದ ಅಧ್ಯಕ್ಷ2024-25ನೇ ಸಾಲಿನ ಮಾವು ನಷ್ಟದ ವರದಿತಾಲೂಕು ವಿಸ್ತೀರ್ಣ ಉತ್ಪನ್ನ ಸರಾಸರಿ (ಹೆಕ್ಟೇರ್) (ಟನ್) (ಪ್ರತಿ ಹೆಕ್ಟೇರ್)ರಾಮನಗರ 10534.35 29773.8 2.82ಚನ್ನಪಟ್ಟಣ 4896.98 12517.2 2.56ಮಾಗಡಿ 6696.15 20355.0 3.03ಕನಕಪುರ 5512.97 11335.5 2.05 ಒಟ್ಟು 27640.45 74035.5 2.68