13ರಂದು ಮೈಸೂರಲ್ಲಿ ಜಿಲ್ಲಾ ರೈತ ಸಮಾವೇಶ

06 feb tnp 01
ತಿ.ನರಸೀಪುರ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರ ಸಭೆಯಲ್ಲಿ ಜಿಲ್ಲಾ ರೈತ ಸಮಾವೇಶದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಹೊಸಕೋಟೆ ಬಸವರಾಜು, ಕರೋಹಟ್ಟಿ ಕುಮಾರಸ್ವಾಮಿ, ಮರಂಕಯ್ಯ, ನಾಗನಹಳ್ಳಿ ವಿಜೇಂದ್ರ, ಬೂದಹಳ್ಳಿ ಶಂಕರ್, ಮಹದೇವ ಸ್ವಾಮಿ ಇದ್ದರು.
Published on

ತಿ.ನರಸೀಪುರ: ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 89ನೇ ಜಯಂತಿ ನೆನಪಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಮೈಸೂರು ಟೌನ್ ಹಾಲ್ ಆವರಣದಲ್ಲಿ ಫೆ.13ರಂದು ಜಿಲ್ಲಾ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ಮುಖಂಡರ ಸಭೆಯಲ್ಲಿ ಜಿಲ್ಲಾ ಸಮಾವೇಶದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ರಾಜ್ಯ ಕಂಡ ಅಪ್ರತಿಮ ಹೋರಾಟಗಾರ, ಸಮಾಜವಾದಿ ಚಿಂತಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜನ್ಮದಿನವಾದ ಫೆ.13ರ ದಿನವನ್ನು ರಾಜ್ಯ ರೈತ ಸಂಘವು ಪ್ರತಿ ವರ್ಷ ವಿಶೇಷವಾಗಿ ಆಚರಿಸುತ್ತಾ ಬಂದಿದೆ ಎಂದರು.

ಈ ವರ್ಷ ಮೈಸೂರಿನ ಟೌನ್‌ಹಾಲ್ ಆವರಣದಲ್ಲಿ ಫೆ.13ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ, ರೈತಪರ, ಗ್ರಾಮೀಣ ಪರ ಯೋಜನೆಗಳನ್ನು ರೂಪಿಸಿ ಕೃಷಿಯನ್ನು ಉಳಿಸಲು ಆಗ್ರಹಿಸಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಹೊಸತನದೊಂದಿಗೆ ಹಳ್ಳಿ-ಹಳ್ಳಿಗೆ ರೈತ ಚಳವಳಿಯನ್ನು ಕೊಂಡೊಯ್ಯಲು ಹಲವಾರು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೊಸಕೋಟೆ ಬಸವರಾಜು ತಿಳಿಸಿದರು.

ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ಮಾತನಾಡಿ, ಫೆ.13ರಂದು ನಡೆಯಲಿರುವ ಸಮಾವೇಶದಲ್ಲಿ ಸಂಯುಕ್ತ ಮೋರ್ಚಾದ ರಾಷ್ಟ್ರೀಯ ಮುಖಂಡರು, ಕರ್ನಾಟಕ ರಾಜ್ಯ ರೈತ ಸಂಘದ ಎಲ್ಲ ಪದಾದಿಕಾರಿಗಳು, ಮಹಿಳಾ ಮತ್ತು ಯುವ ಘಟಕದ ಪದಾಧಿಕಾರಿಗಳು ಹಾಗೂ ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡರು ಭಾಗವಹಿಸಲಿದ್ದು, ಜಿಲ್ಲೆ ಸೇರಿದಂತೆ ತಾಲೂಕಿನ ರೈತರು, ರೈತ ಮಹಿಳೆಯರು, ಪ್ರಗತಿಪರ ಸಂಘಟನೆಗಳ ಮುಖಂಡರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ರೈತ ಸಂಘಕ್ಕೆ ಕಾರ್ಮಿಕ ಮುಖಂಡ ಹೊರಳಹಳ್ಳಿ ಎನ್.ರವಿಕುಮಾರ್ ಸೇರ್ಪಡೆಗೊಂಡರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಮೈಸೂರು ಜಿಲ್ಲಾ ಕಾರ್ಯದರ್ಶಿ ನಾಗನಹಳ್ಳಿ ವಿಜೇಂದ್ರ, ಕಾರ್ಯದರ್ಶಿ ಬೂದಹಳ್ಳಿ ಶಂಕರ್, ಗೌರವಾಧ್ಯಕ್ಷ ಮಹದೇವ ಸ್ವಾಮಿ, ಕಾರ್ಯಾಧ್ಯಕ್ಷ ಶಾಂತಕುಮಾರ್, ಖಜಾಂಚಿ ಮಹೇಶ್ ಕುಮಾರ್, ಕೊತ್ತೇಗಾಲ ಮಹೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಹೋಬಳಿ ಅಧ್ಯಕ್ಷ ಹುಚ್ಚೇಗೌಡ, ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net