

ಕೆ.ಆರ್.ಪ್ರಸಿನ್ ಹಾಸನ
ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಸೆ.22ರಿಂದ ಅ.7ರವರೆಗೆ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಗೆ ಜಿಲ್ಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅದರಲ್ಲೂ ಸೂರಿಲ್ಲದೆ ಗುಡಿಸಲು, ಟೆಂಟ್‌ಗಳಲ್ಲಿ ವಾಸಿಸುತ್ತಿರುವವರು ಸಮೀಕ್ಷೆಯಿಂದ ಹೊರಗುಳಿಯಬಾರದೆಂಬ ಉದ್ದೇಶದಿಂದ ವಿಶೇಷ ಗಮನ ಹರಿಸಲಾಗಿದೆ.
ಗುಡಿಸಲು ಮತ್ತು ಟೆಂಟ್‌ಗಳ ನಿರ್ಮಿಸಿಕೊಂಡು ಬದುಕು ನಡೆಸುತ್ತಿರುವ ಕುಟುಂಬಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪಟ್ಟಿ ಮಾಡಿದೆ. ಅರಕಲಗೂಡಿನಲ್ಲಿ 11 ಕುಟುಂಬ, ಅರಸೀಕೆರೆಯಲ್ಲಿ 9 ಪ್ರದೇಶ, ಸಕಲೇಶಪುರದಲ್ಲಿ 931 ಮನೆ, ಬೇಲೂರಿನಲ್ಲಿ 47 ಮನೆ, ಚನ್ನರಾಯಪಟ್ಟಣ ತಾಲೂಕಿನಲ್ಲಿ 1058 ಕುಟುಂಬ, ಹಾಸನದಲ್ಲಿ 831 ಕುಟುಂಬಗಳನ್ನು ಗುರುತಿಸಿದೆ.
ಒಟ್ಟು 5,47,325 ಕುಟುಂಬ
ಸಮೀಕ್ಷೆಯ ಪೂರ್ವ ತಯಾರಿಗಾಗಿ ಸೆಸ್ಕ್ ಸಿಬ್ಬಂದಿಗೆ ವಹಿಸಲಾಗಿದ್ದ ಜಿಯೋ ಟ್ಯಾಗಿಂಗ್ ಕಾರ್ಯ ಪೂರ್ಣ ಗೊಂಡಿದ್ದು ಜಿಲ್ಲೆಯ 5,47,325ಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ಸೆ. 22ರಿಂದ ಆರಂಭವಾಗಲಿದೆ. ಜಿಲ್ಲೆಯ ಸೆಸ್ಕ್ ಮೀಟರ್ ರೀಡರ್‌ಗಳು ಆ.23ರಿಂದ ಆರಂಭಿಸಿದ ಜಿಯೋ ಟ್ಯಾಗಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸಮೀಕ್ಷೆಯಿಂದ ಯಾರೂ ಹೊರಗುಳಿಯಬಾರದೆಂಬ ಉದ್ದೇಶದಿಂದ ಪ್ರತಿ ಮನೆ ಬಾಗಿಲಿಗೆ ಸಹ ಸ್ಟಿಕ್ಕರ್ ಅಂಟಿಸಲಾಗಿದೆ.
ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳು
ರಾಜ್ಯದ ಪ್ರತಿ ನಾಗರಿಕನ ಶೈಕ್ಷಣಿಕ ವಿದ್ಯಾರ್ಹತೆ, ಸಾಮಾಜಿಕ ಸ್ಥಿತಿಗತಿ, ಮೂಲ ಕಸುಬು, ಪ್ರಸಕ್ತ ನಿರ್ವಹಿಸುತ್ತಿರುವ ಕಸುಬು, ಸರ್ಕಾರಿ ಉದ್ಯೋಗದ ನಿಖರ ಮಾಹಿತಿ, ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ 40 ಹಾಗೂ ಕುಟುಂಬಕ್ಕೆ ಸಂಬಂಧಿಸಿದ 20 ಸೇರಿ ಒಟ್ಟು 60 ಪ್ರಶ್ನೆಗಳಿಗೆ ಸಮೀಕ್ಷೆಗೊಳಪಡುವ ಕುಟುಂಬಸ್ಥರು ಉತ್ತರಿಸಬೇಕಾಗುತ್ತದೆ. ಪಟ್ಟಿ ಮಾಡಲಾದ ಮನೆಗಳನ್ನು ಸಮೀಕ್ಷೆ ನಡೆಸಲು 4,746 ಸಮೀಕ್ಷಾದಾರರು ಕರ್ತವ್ಯ ನಿರ್ವಹಿಸಲಿದ್ದಾರೆ. ಅವರನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ 480 ಮೇಲ್ವಿಚಾರಕರನ್ನು ನೇಮಿಸಲಾಗಿದೆ. 150 ಮನೆಗಳ ಗುಂಪಿಗೆ ಒಂದು ಬ್ಲಾಕ್‌ನಂತೆ ಒಟ್ಟು 3,689 ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ.
ರಾಜ್ಯದಿಂದ ಆಯ್ಕೆಯಾಗಿರುವ 6 ಮಾಸ್ಟರ್ ತರಬೇತುದಾರರು ಜಿಲ್ಲೆಯ 100 ತರಬೇತುದಾರರಿಗೆ ಅರಿವು ಮೂಡಿಸಲಾಗಿದೆ. ಅಂತಿಮ ಹಂತದ ಕಾರ್ಯಾಗಾರ ಸೆ. 19 ಮತ್ತು 20 ರಂದು ನಡೆಯಲಿದೆ. 50 ಗಣತಿದಾರರಿಗೊಬ್ಬರಂತೆ ಒಬ್ಬ ಮಾಸ್ಟರ್ ತರಬೇತುದಾರನನ್ನು ನೇಮಿಸಲಾಗಿದೆ. ಜಿಲ್ಲೆಯ ಆಯಾ ತಾಲೂಕು ತಹಸೀಲ್ದಾರ್ ನೇತೃತ್ವದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ನಿಯೋಜಿಸಲ್ಪಡುವ ಗಣತಿದಾರರಿಗೆ ತರಬೇತಿ ನೀಡಲು ಮೈಕ್ರೋ ಫ್ಲಾನಿಂಗ್ ಮಾಡಿಕೊಳ್ಳಲಾಗಿದ್ದು ಶಾಲಾ ಅವಧಿಯ ಬಳಿಕವಷ್ಟೇ ಗಣತಿದಾರ ಶಿಕ್ಷಕರಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ.
ಮುಖ್ಯವಾಗಿ ವಿದ್ಯುತ್ ಮೀಟರ್ ಇರುವಂತಹ ಕುಟುಂಬಗಳನ್ನು ಗುರುತಿಸಲಾಗಿದ್ದು, ಆರ್‌ಆರ್ ಇಲ್ಲದವರ ಮಾಹಿತಿಯನ್ನು ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಿಲ್ ಕಲೆಕ್ಟರ್ ಮತ್ತಿತರ ಸಿಬ್ಬಂದಿ ಮೂಲಕ ಮಾಹಿತಿ ಕಲೆಹಾಕಲಾಗುತ್ತಿದೆ. ಆರ್‌ಆರ್ ರಹಿತ ಕುಟುಂಬಗಳನ್ನು ಗ್ರಾಪಂ, ನಾಡ ಕಚೇರಿ ಬಳಿ ಸಮೀಕ್ಷೆಗೊಳಪಡಿಸಲು ಯೋಜಿಸಲಾಗಿದೆ.
ತಹಸೀಲ್ದಾರ್ ಕಚೇರಿಯಲ್ಲೂ ಅವಕಾಶ
ಸೆ.22ರಿಂದ ಆ.7ರವರೆಗೆ ಸಮೀಕ್ಷೆಗಾಗಿ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಕುಟುಂಬ ಸದಸ್ಯರು ಇಲ್ಲದಿದ್ದರೆ ಅಂತಹವರು ಹತ್ತಿರದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಲ್ಲಿಸಬಹುದು. ಆಧಾರ್ ಹಾಗೂ ರೇಷನ್ ಕಾರ್ಡ್ ಸಮೀಕ್ಷೆ ವೇಳೆ ಸಲ್ಲಿಸಲು ಸೂಚಿಸಲಾಗಿದೆ.
ತಾಲ್ಲೂಕು ನಗರ ಗ್ರಾಮೀಣ ಒಟ್ಟು
ಸಕಲೇಶಪುರ 8,365 30,365 38,730
ಆಲೂರು 4,385 20,253 24,638
ಹಾಸನ 79,571 73,569 1,53,140
ಅರಕಲಗೂಡು 6,294 49,924 56,218
ಚನ್ನರಾಯಪಟ್ಟಣ 18,859 69,781 88,634
ಅರಸೀಕೆರೆ 17,494 68,659 86,159
ಹೊಳೆನರಸೀಪುರ 12,192 40,610 52,810
ಬೇಲೂರು 7,400 39,616 47,016
ಒಟ್ಟು 1,54,558 3,92,787 5,47,325