

ವಿಜಯಪುರ: ಕಮ್ಮಾರ, ಕುಮ್ಮಾರ, ಉಪ್ಪಾರ, ಬಡಗಿ, ಅಲೆಮಾರಿ ಪಶುಪಾಲಕರು ಸೇರಿದಂತೆ ವಿವಿಧ 91 ವರ್ಗದ ಅಸಂಘಟಿತ ಕಾರ್ಮಿಕ ವರ್ಗವನ್ನು ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ’ ಎಂಬ ಒಂದೇ ಯೋಜನೆಯಡಿ ತಂದು ಸಾಮಾಜಿಕ ಭದ್ರತೆ ಕಲ್ಪಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಶೇ.85ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಅವರಿಗೆ ಸ್ಮಾರ್ಟ್ ಕಾಡ್ ವಿತರಿಸಲಾಗುತ್ತಿದೆ. ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಅಸಂಘಟಿತ ಕಾರ್ಮಿಕ ವಲಯ ಗೌರವಯುತ, ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.
ಸಾರಿಗೆ ವಲಯದ ಕಾರ್ಮಿಕರಿಗಾಗಿ ಸಾರಿಗೆ ಬೋರ್ಡ್ ಸ್ಥಾಪಿಸಲಾಗಿದ್ದು, ಈ ಬೋರ್ಡ್‌ನಲ್ಲಿರುವ ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಸೇರಿದಂತೆ ಅನೇಕ ವರ್ಗದ ಜನರಿಗೆ ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಸುಮಾರು 25 ಲಕ್ಷ ಜನರಿಗೆ ನೇರವಾಗಿ ಈ ಯೋಜನೆಯ ಲಾಭ ತಟ್ಟಲಿದೆ ಎಂದರು.
ರಾಜ್ಯದಲ್ಲಿ ಗಂಟೆಗೆ 20 ವಾಹನ ಅಪಘಾತಗಳು ಸಂಭವಿಸುತ್ತಿವೆ. ವರ್ಷಕ್ಕೆ 4.80 ಲಕ್ಷ ಅಪಘಾತಗಳಾಗುತ್ತಿದ್ದು, ಸುಮಾರು 1.60 ಲಕ್ಷ ಜನ ವರ್ಷದಲ್ಲಿ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಒಳಗೊಂಡು ಸಾರಿಗೆ ಬೋರ್ಡ್ ರಚಿಸಲಾಗಿದ್ದು, ಅಪಘಾತ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆಯಲ್ಲದೇ ಅಪಘಾತದಿಂದ ನೊಂದ ಜೀವಗಳಿಗೆ ನೆರವು ನೀಡಲಾಗುತ್ತಿದೆ ಎಂದರು.
ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೀದರ್ ಮಾದರಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೊಸಾಯಿಟಿ ರಚನೆ ಮಾಡಿ ಸೊಸಾಯಿಟಿ ಮೂಲಕವೇ ವೇತನ ಪಾವತಿಸುವ ವ್ಯವಸ್ಥೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ವಿವಿಧ ಖಾಸಗಿ ವಲಯದ ಕೈಗಾರಿಕೆ, ಕಾರ್ಖಾನೆಗಳಲ್ಲಿ ಹೆಚ್ಚೆಚ್ಚು ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಶಾ ದೀಪ ಯೋಜನೆಯನ್ನು ಜಾರಿಗೊಳಿಸಿ ಮಾಲೀಕರು ಹಾಗೂ ಉದ್ಯೋಗದಾತರನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದೇ ರೀತಿ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ, ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ, ಕರ್ನಾಟಕ ರಾಜ್ಯ ದಿನ ಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ, ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿ, ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಸುಂಕ ಅಧಿನಿಯಮ-2024, ಕರ್ನಾಟಕ ಪ್ಲಾಟ್‌ಫಾರ್ಮ ಆಧಾರಿತ ಗಿಗ್ ಕಾರ್ಮಿಕರ ಅಧಿನಿಮ-2025, ಕಾರ್ಮಿಕರಿಗೆ ಸುರಕ್ಷತೆ ಒದಗಿಸುವ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು-2024 ಸೇರಿದಂತೆ ಮಂಡಳಿ ವತಿಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ವಿಠಲ ಕಟಕದೊಂಡ ಮಾತನಾಡಿ, ಅಸಂಘಟಿತ ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ವಿತರಿಸುವ ಮೂಲಕ ದುರ್ಬಲ ವರ್ಗದವರನ್ನು ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಾರ್ಮಿಕರು ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಬದುಕನ್ನು ಸುಭದ್ರಗೊಳಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ದುಡಿದು ಊಟ ಮಾಡುವ ಸತ್ಯ ಶುದ್ಧ ಕಾಯಕ ಮಾಡುವವರು ಕಾರ್ಮಿಕರು. ಯಾವ ದೇಶದಲ್ಲಿ ಕಾರ್ಮಿಕರ ಹಿತ ಕಾಪಾಡಲಾಗುತ್ತದೋ ಯಾವ ದೇಶದಲ್ಲಿ ಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರಲು ಯತ್ನಿಸಲಾಗುತ್ತದೋ ಆ ದೇಶ ಮತ್ತು ರಾಜ್ಯ ಸಮೃದ್ಧವಾಗಿರಲಿದೆ. ಆ ನಿಟ್ಟಿನಲ್ಲಿ ಸಂತೋಷ ಲಾಡ್ ಕಾರ್ಯ್ನಿರ್ವಹಿಸುತ್ತಿದ್ದಾರೆ ಎಂದರು.
ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಜಂಟಿ ಕಾರ್ಯದರ್ಶಿಗಳಾದ ಡಾ.ಎಸ್.ಬಿ.ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸರ್ಕಾರದ ಯೋಜನೆಗಳ ಕುರಿತು ವಿವರಿಸಿದರು.
ಜಿಲ್ಲಾಧಿಕಾರಿ ಡಾ.ಆನಂದ ಕೆ, ಕಾರ್ಮಿಕ ಇಲಾಖೆ ಉಪ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ, ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಕನ್ನಾನ ಮುಶ್ರೀಫ್, ಅನೀಲಕುಮಾರ ಪಾಟೀಲ, ಮಲ್ಲನಗೌಡ ಪಾಟೀಲ ಮತ್ತಿತರರಿದ್ದರು.
ಸಾಂಕೇತಿಕವಾಗಿ 15 ಜನ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರದಡಿ ಇಬ್ಬರಿಗೆ ಪರಿಹಾರ ಚೆಕ್, ಅಪಘಾತದಿಂದ ಮರಣ ಹೊಂದಿದ ಇಬ್ಬರೂ ಕಾರ್ಮಿಕರ ಮಕ್ಕಳಿಗೆ ತಲಾ 10 ಸಾವಿರ ರೂ. ಚೆಕ್ ಮತ್ತು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಮರಣ ಹೊಂದಿದ ಕಾರ್ಮಿಕರ ಅವಲಂಬಿತರಿಗೆ 10 ಸಾವಿರ ರೂ.ಗಳ ಚೆಕ್‌ನ್ನು ವಿತರಿಸಲಾಯಿತು.