ಧರ್ಮಸ್ಥಳದಲ್ಲಾದ ಸರಣಿ ಕೊಲೆ ಪ್ರಕರಣ, ಸೌಜನ್ಯ ಕೇಸ್ ಕೈ ಬಿಟ್ಟ ಕುರಿತ ಚರ್ಚೆ, ಯಾವುದೇ ಕೇಸ್-ಯಾರೇ ಪ್ರಭಾವಿ ಇದ್ದರೂ ಕ್ರಮ ನಿಶ್ಚಿತ ಎಂದ ಸಚಿವ ಸಂತೋಷ ಲಾಡ್

santosh lad new
Published on

ವಿಜಯಪುರ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸರಣಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಎಸ್‌ಐಟಿ ರಚನೆಯ ತನಿಖಾ ಪಟ್ಟಿಯಲ್ಲಿ ಸೌಜನ್ಯಾ ಕೊಲೆ ಪ್ರಕರಣ ಇಲ್ಲವೆಂಬುದನ್ನು ತಳ್ಳಿ ಹಾಕಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು, ಯಾವುದೇ ಕೇಸ್ ಆದರೂ ಬಿಡುವ ಪ್ರಮೇಯವೇ ಇಲ್ಲವೆಂದಿದ್ದಾರೆ.

ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಿನ್ನೆಲೆ ಬುಧವಾರ ವಿಜಯಪುರಕ್ಕೆ ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾವುದೇ ಕೇಸ್ ಆದರೂ ಸರಿ ಬಿಡೋದಕ್ಕೆ ಸಾಧ್ಯವಿಲ್ಲ ಮತ್ತು ಬಿಡುವುದೂ ಇಲ್ಲ, ಯಾರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕೈಗೊಳ್ಳಬೇಕಾಗಿರುವ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳುತ್ತಾರೆಂದರು.

ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಈಗಲಾದರೂ ಬಿಜೆಪಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ ಇಲ್ಲವೆಂದು ಅರ್ಥವಾಯಿತಲ್ಲ; ಉಪರಾಷ್ಟ್ರಪತಿ ಯಾಕೆ ರಾಜೀನಾಮೆ ಕೊಟ್ಟರು? ಅವರ ಮೇಲೆ ಯಾರ ಒತ್ತಡ ಇದೆ ಎಂಬುದನ್ನು ಬಿಜೆಪಿಗೆ ದಯಮಾಡಿ ಕೇಳಿ ಎಂದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ನಡುವಿನ ಶೀತಲ ಸಮರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಲಾಡ್, ಅಂಥ ಯಾವುದೇ ಶೀತಲ ಸಮರ ಇಲ್ಲ, ಬೋರ್ಡ್, ಕಾರ್ಪೋರೇಷನ್ ಹಾಗೂ ಎಂಎಲ್‌ಸಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ದೆಹಲಿಗೆ ಹೋಗಿದ್ದಾರೆ ಎಂದರು.

ಕಾರ್ಮಿಕರಲ್ಲದವರಿಗೆ ಕಾರ್ಮಿಕ ಕಾರ್ಡ್ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಸುತ್ತಾ, ಈ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 56 ಲಕ್ಷ ಕಾರ್ಡ್‌ಗಳಲ್ಲಿ 20 ಲಕ್ಷ ಕಾರ್ಡ್ ರದ್ದುಗೊಳಿಸಲಾಗಿದೆ. 36 ಲಕ್ಷ ಜನರಿಗೆ ಕಾರ್ಮಿಕ ಕಾರ್ಡ್ ನೀಡಿರುವುದಾಗಿ ತಿಳಿಸಿದರಲ್ಲದೇ, ಕಾರ್ಮಿಕರು ಹೌದೋ ಅಲ್ಲವೋ ಎಂಬುದನ್ನು ನಿಖರವಾಗಿ ತಿಳಿದುಕೊಂಡು ಕಾರ್ಡ್ ನೀಡುತ್ತಿರುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net