

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಗ್ರಾಮೀಣ ಪ್ರದೇಶದಿಂದ ಬಂದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗದೆ ಆಸಕ್ತಿಯ ವಿಚಾರಗಳಲ್ಲಿ ಸಂಶೋಧನೆ ನಡೆಸಲು ಆರ್ಥಿಕ ಹಿನ್ನಡೆಯಲ್ಲಿರುವವರಿಗೆ ಶಿಕ್ಷಣ ಸಂಸ್ಥೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಸದುಪಯೋಗಪಡಿಸಿಕೊಂಡು ಕಠಿಣ ಪರಿಶ್ರಮದೊಂದಿಗೆ ಸಾಧನೆಗೈದು ಸಮಾಜದಲ್ಲಿ ಪ್ರಕಾಶಿಸುವಂತಹ ವ್ಯಕ್ತಿಗಳಾಗಿ ಬೆಳೆಯಿರಿ ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.
ಉಜಿರೆ ಎಸ್ಡಿಎಂ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಗುರುವಾರ 2000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ 2.50 ಕೋಟಿ ರೂ. ಮೊತ್ತದ ವಿದ್ಯಾರ್ಥಿವೇತನವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.
ಕುಗ್ರಾಮವಾಗಿದ್ದ ಉಜಿರೆಯ ಎಸ್ಡಿಎಂ ಕಾಲೇಜು ಉತ್ತಮ ಗುಣಮಟ್ಟದ ಶಿಕ್ಷಣದಿಂದ ರಾಷ್ಟ್ರಮಟ್ಟದಲ್ಲಿ 67ನೇ ರ್ಯಾಂಕ್ ಪಡೆದಿದ್ದು, ಉಪನ್ಯಾಸಕ ವೃಂದದ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಶ್ರಮದಿಂದಾಗಿ ಎಸ್ಡಿಎಂ ಉಜಿರೆಯ ಲ್ಯಾಂಡ್ ಮಾರ್ಕ್ ಆಗಿ ಗುರುತಿಸಲ್ಪಟ್ಟಿದೆ ಎಂದರು.
ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಎಸ್ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ.ಸೌಮ್ಯಾ ಬಿ.ಪಿ. ಉಪಸ್ಥಿತರಿದ್ದರು. ಎಸ್ಡಿಎಂ ಕಾಲೇಜು ಪ್ರಾಚಾರ್ಯ ಡಾ.ವಿಶ್ವನಾಥ ಪಿ. ಸ್ವಾಗತಿಸಿದರು. ರಸಾಯನ ಶಾಸ್ತ್ರ ವಿಭಾಗದ ಡಾ.ನಫೀಸತ್ ಕಾರ್ಯಕ್ರಮ ನಿರೂಪಿಸಿದರು. ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಅಶೋಕಕುಮಾರ್ ಟಿ. ವಂದಿಸಿದರು. ಪೂರ್ಣಿಮಾ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಮಾಹಿತಿ ನೀಡಿದರು.
56 ಶಿಕ್ಷಣ ಸಂಸ್ಥೆಗಳನ್ನು ಹೊಂದಿದ ಎಸ್ಡಿಎಂ ಶಿಕ್ಷಣ ಸಂಸ್ಥೆ ಜತೆಗೆ ಜುಲೈ 14ರಂದು ಕಾಂಚನದಲ್ಲಿ 1.70 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಕನ್ನಡ ಶಾಲೆಯನ್ನು ಪ್ರಾರಂಭಿಸಲಾಗುತ್ತಿದ್ದು, ಸರ್ಕಾರದ ದ್ವಿಭಾಷಾ ನೀತಿಯಂತೆ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷಾಧ್ಯಯನ ಪ್ರಾರಂಭಿಸಲಾಗಿದೆ. ಡಿ.ಹರ್ಷೇಂದ್ರ ಕುಮಾರ್ ಎಸ್ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ