

ಬೆಟ್ಟದಪುರ: ಬೆಟ್ಟದಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಕಚೇರಿವತಿಯಿಂದ ಈ ವ್ಯಾಪ್ತಿಯ ಆರು ಸರ್ಕಾರಿ ಶಾಲೆಗಳಿಗೆ ಜ್ಞಾನ ದೀಪಾ ಶಿಕ್ಷಕರ ಮಂಜೂರಾತಿ ಪತ್ರವನ್ನು ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಇತ್ತೀಚೆಗೆ ವಿತರಣೆ ಮಾಡಿದರು.
ಆನಂದ ಸುವರ್ಣ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಬೆಟ್ಟದಪುರ ಯೋಜನಾ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ನಿಯೋಜಿಸಲಾದ ಜ್ಞಾನ ದೀಪಾ ಶಿಕ್ಷಕರಿಗೆ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಗಿದೆ. ಶ್ರೀ ಕ್ಷೇತ್ರ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಶಾಲೆಗಳಿಗೆ ಪೀಠೋಪಕರಣ ಒದಗಿಸುವ ಕಾರ್ಯಕ್ರಮ, ಜ್ಞಾನ ದೀಪಾ ಶಿಕ್ಷಕರ ಒದಗಿಸುವುದು, ಉನ್ನತ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಪಾವತಿ ಮೂಲಕ ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗಿದೆ. ಇದುವರೆಗೆ ರಾಜ್ಯದಲ್ಲಿ ಸುಮಾರು 1130 ಜ್ಞಾನ ದೀಪಾ ಶಿಕ್ಷಕರನ್ನು ಒದಗಿಸಲಾಗಿದೆ ಎಂದರು.
ಸಮೀಪದ ಭುವನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಅರ್ಚನಾ, ಬ್ಯಾಡರಬಿಳುಗೂಳಿ ಸರ್ಕಾರಿ ಶಾಲೆಯ ಶಿಕ್ಷಕಿ ತಾಸಿನ ಖಾನಂ, ಶ್ಯಾನುಭೋಗನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಕವನಾ, ಕುಳ್ಳಯ್ಯನ ಕೊಪ್ಪಲು ಸರ್ಕಾರಿ ಶಾಲೆಯ ಶಿಕ್ಷಕಿ ಮೈನಾ, ಅಂಬಲಾರೆ ಸರ್ಕಾರಿ ಶಾಲೆಯ ಶಿಕ್ಷಕಿ ರೂಪಾ ಮತ್ತು ಹೊನ್ನಾಪುರ ಸರ್ಕಾರಿ ಶಾಲೆಯ ಶಿಕ್ಷಕಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ, ಯೋಜನಾಧಿಕಾರಿ ಸಂತೋಷ್ ಕುಮಾರ್, ಮೇಲ್ವಿಚಾರಕರು, ಶ್ರೇಣಿಯ ಸಿಬ್ಬಂದಿಗಳು, ಸೇವಾಪ್ರತಿನಿಧಿ, ಜ್ಞಾನ ದೀಪಾ ಶಿಕ್ಷಕರು ಇದ್ದರು.