ತಂಡ್ರಕುಳಿ ಸಂತ್ರಸ್ತರಿಗೆ ಪರಿಹಾರ ವಿತರಣೆ

23KMT1
Published on

ಕುಮಟಾ: ತಾಲೂಕಿನ ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿ ಸಂದರ್ಭದಲ್ಲಿ ಗುಡ್ಡ ಕುಸಿತ ಹಾಗೂ ಬ್ಲಾಸ್ಟಿಂಗ್​ನಿಂದ ಸ್ಥಳೀಯರಿಗೆ ಉಂಟಾದ ಹಾನಿ ಪರಿಹಾರವನ್ನು ಶಾಸಕ ದಿನಕರ ಶೆಟ್ಟಿ ಶುಕ್ರವಾರ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಚತುಷ್ಪಥ ಕಾಮಗಾರಿಯಲ್ಲಿ ಬ್ಲಾಸ್ಟಿಂಗ್ ವೇಳೆ ಹಾನಿ ಅನುಭವಿಸಿದ ತಂಡ್ರಕುಳಿಯ ಸಂತ್ರಸ್ತರಿಗೆ ಶೀಘ್ರ ತಕ್ಕಮಟ್ಟಿನ ಪರಿಹಾರ ಕೊಡಿಸುವ ಮಾತು ಕೊಟ್ಟಂತೆ ಒಟ್ಟು 14 ಸಂತ್ರಸ್ತ ಕುಟುಂಬಗಳಿಗೆ 4.20 ಲಕ್ಷ ರೂ. ಪರಿಹಾರದ ಚೆಕ್​ಗಳನ್ನು ವಿತರಿಸಿದ್ದೇನೆ. ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿ ಮುಂದುವರೆಸುವುದಕ್ಕೆ ಸ್ಥಳೀಯರು ಈಗಾಗಲೇ ಸಮ್ಮತಿಸಿದ್ದು ಮುಂದಿನ ದಿನದಲ್ಲಿ ಐಆರ್​ಬಿ ಕಡೆಯಿಂದ ಪುನಃ ಯಾವುದೇ ಸಮಸ್ಯೆ ಉದ್ಭವಿಸಿದರೂ ನಾನು ಗ್ರಾಮಸ್ಥರ ಜೊತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ಸಂತ್ರಸ್ತರಾದ ಈರಮ್ಮ ಅಂಬಿಗ, ರಾಮಾ ಅಂಬಿಗ, ವೆಂಕಪ್ಪ ಅಂಬಿಗ, ಸುಬ್ರಾಯ ಅಂಬಿಗ, ಗಣಪಯ್ಯ ಅಂಬಿಗ, ಗಣಪತಿ ದುರ್ಗ ಅಂಬಿಗ, ಸುಶೀಲಾ ಅಂಬಿಗ, ರಮೇಶ ಅಂಬಿಗ, ಗಣಪತಿ ಶಿವಪ್ಪ ಅಂಬಿಗ, ಮಹಾದೇವ ಅಂಬಿಗ, ಪ್ರಮೀಳಾ ಅಂಬಿಗ, ಈಶ್ವರಪ್ಪ ಅಂಬಿಗ, ನಾಗವೇಣಿ ಅಂಬಿಗ, ರಾಘವೇಂದ್ರ ಅಂಬಿಗ ಅವರಿಗೆ ಚೆಕ್ ವಿತರಿಸಲಾಯಿತು. ಐಆರ್​ಬಿ ಕಂಪನಿಯ ಅಧಿಕಾರಿ ವೆಂಕಟ್ರಮಣ ಹೆಗಡೆ, ತಹಸೀಲ್ದಾರ್ ಮೇಘರಾಜ ನಾಯ್ಕ, ದಿವಗಿ ಪಂಚಾಯಿತಿ ಸದಸ್ಯೆ ಮಂಗಲಾ ಭಟ್, ಹೇಮಂತಕುಮಾರ ಗಾಂವಕರ ಇನ್ನಿತರರು ಇದ್ದರು.
ಇದೇ ವೇಳೆ ಆರಾಧನಾ ಯೋಜನೆಯಡಿ ಅನುದಾನ ಮಂಜೂರಿ ಪಡೆದ 4 ದೇವಾಲಯ ಸಮಿತಿಗೆ ಒಟ್ಟು 1.50 ಲಕ್ಷ ರೂ. ಚೆಕ್ ವಿತರಿಸಲಾಯಿತು. ವನ್ನಳ್ಳಿಯ ದೇವರ್ಸ ಜಟಗದೇವ ಮಂದಿರ ಹಾಗೂ ಬೊಬ್ರುದೇವ ಮಂದಿರಕ್ಕೆ ತಲಾ 25 ಸಾವಿರ ರೂ, ಬೆಟ್ಕುಳಿಯ ಬೊಮ್ಮಯ್ಯ ದೇವಸ್ಥಾನಕ್ಕೆ ಹಾಗೂ ಗಂಗೆಕೊಳ್ಳದ ಸತ್ಯನಾರಾಯಣ ಮಂದಿರಕ್ಕೆ ತಲಾ 50 ಸಾವಿರ ರೂ. ಚೆಕ್ ಅನ್ನು ಮಂದಿರ ಸಮಿತಿಯ ವತಿಯಿಂದ ಆಗಮಿಸಿದ್ದ ಪ್ರತಿನಿಧಿಗಳು ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net