ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ

Anganwadi_Workers
Published on

ತುಮಕೂರು: ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂ., ಹಾಗೂ ಸಹಾಯಕಿಯರಿಗೆ 750 ರೂ.,ಗಳ ಗೌರವ ಧನವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರ ಕೇಂದ್ರ ಗ್ರಂಥಾಲಯ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿ ಆದೇಶ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ 11,000 ರೂ. ಹಾಗೂ ಸಹಾಯಕಿಯರಿಗೆ 6250 ರೂ., ಗೌರವಧನ ನೀಡಲಾಗುತ್ತಿತ್ತು. ಇದೀಗ ಸರ್ಕಾರದ ಆದೇಶದನ್ವಯ ಕಾರ್ಯಕರ್ತೆಯರಿಗೆ 12,000 ರೂ. ಹಾಗೂ ಸಹಾಯಕಿಯರಿಗೆ 7000 ರೂ. ಗೌರವಧನ ನೀಡಲಾಗುವುದು. ಕಳೆದ 2 ವರ್ಷಗಳಲ್ಲಿ ಸಂಬಳವನ್ನು ಎರಡು ಬಾರಿ ಹೆಚ್ಚಿಸಲಾಗಿದೆ ಎಂದರು.

3378 ಅಂಗನವಾಡಿಗಳಿಗೆ ಸ್ವಂತಕಟ್ಟಡ: ಜಿಲ್ಲೆಯಲ್ಲಿರುವ ಒಟ್ಟು 4199 ಅಂಗನವಾಡಿಗಳಲ್ಲಿ 3378 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದು, ಉಳಿದ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ನಿರ್ಮಿಸಬೇಕಾಗಿದೆ ಎಂದು ಪರಮೇಶ್ವರ ತಿಳಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಉತ್ತಮ ಪೋಷಕಾಂಶವುಳ್ಳ ಗುಣಮಟ್ಟದ ಆಹಾರವನ್ನು ನೀಡಬೇಕು. ಮಕ್ಕಳು ಪೌಷ್ಟಿಕತೆಯಿಂದ ಬೆಳೆಯಲು ಗರ್ಭಿಣಿಯರ ಆರೋಗ್ಯ ಮುಖ್ಯವಾಗಿದ್ದು, ಗರ್ಭಿಣಿಯರ ಆರೋಗ್ಯಕ್ಕಾಗಿ ಕೇಂದ್ರ ಸರ್ಕಾರವು ಇಂಟಿಗ್ರೇಶನ್​ ಚೈಲ್ಡ್​ ಡೆವಲಪ್​ಮೆಂಟ್​ ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರದ ಯೋಜನೆಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.

ತಾಯಂದಿರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವುದೇ ಅಂಗನವಾಡಿ ಕೇಂದ್ರಗಳ ಮುಖ್ಯ ಉದ್ದೇಶವಾಗಿದ್ದು, ಮಕ್ಕಳು ಆರು ವರ್ಷದವರೆಗೂ ಬೌದ್ಧಿಕ, ಮಾನಸಿಕ ಹಾಗೂ ದೈಹಿಕವಾಗಿ ಬೆಳೆಯಲು ಅಂಗನವಾಡಿ ಕಾರ್ಯಕರ್ತೆಯರು ನೆರವಾಗುತ್ತಾರೆ.ಇತ್ತೀಚಿನ ದಿನಗಳಲ್ಲಿ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಬಡವರು, ಅನುಕೂಲಸ್ಥರು ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುವಂತೆ ಪರಿಣಾಮಕಾರಿಯಾಗಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ಅಂಗನವಾಡಿ ಕೇಂದ್ರಗಳನ್ನು ಶಾಲಾ ಆವರಣದಲ್ಲಿಯೇ ನಡೆಸುವುದರಿಂದ ಮಕ್ಕಳ ಮುಂದಿನ ತರಗತಿ ಕಲಿಕೆಗೂ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ 86 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 212 ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು.

ತುಮುಲ್​ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಎಚ್​.ವಿ.ವೆಂಕಟೇಶ್​, ಜಿಲ್ಲಾಧಿಕಾರಿ ಶುಭ ಕಲ್ಯಾಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್​ ಕುಮಾರ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net